Welcome, Guest   [ Register | Sign In | Take a tour | Adult Filter: On ]

ಕೃಷಿಕರ ಗೋಳು ಕೇಳೋರ್ಯಾರು

ದಕ್ಷಿಣ ಕನ್ನಡದ ವಾಣಿಜ್ಯ ಬೆಳೆ ಅಡಿಕೆ. ಹೊರನಾಡಿಗೆ ಆರ್ಥಿಕ ಸುಭದ್ರ ಜಿಲ್ಲೆ ಎಂದು ಕಂಡು ಬಂದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಕೊಳೆರೋಗದ ಸಮಸ್ಯೆ ಹೀಗೆ ಸಮಸ್ಯೆಗಳ ಸುತ್ತವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಇಲ್ಲಿನ ಕೃಷಿಕರಿಗೆ ಇನ್ನೊಂದು ಭೂತಾಕಾರವಾಗಿ ಕಾಡುತ್ತಿರುವುದು ಹೂ ಬಳ್ಳಿಯ ರೀತಿಯಲ್ಲಿ ಕಾಣುತ್ತಿರುವ ಕಳೆ ಗಿಡಗಳು. ಪಾತಿಯಲ್ಲಿ ಹಾಕಿದ ಅರಿವೆ ಗಿಡಗಳ ಹಾಗೆ ಈ ಬಳ್ಳಿಗಳು ಹುಲುಸಾಗಿ ಬೆಳೆದು ಹಳದಿ ಬಣ್ಣದ ಹೂವನ್ನು ಬಿಡುತ್ತವೆ.

ಕೊಕ್ಕಡ ಗ್ರಾಮದ ಕೆಂಗುಡೇಲು ಮನೆಯ ಪದ್ಮಯ ಗೌಡರ ಮಗಳು 2 ವರುಷಗಳ ಹಿಂದೆ ಹೂ ಬಿಡುವ ಈ ಬಳ್ಳಿಯ ಚೆಂದವನ್ನು ನೋಡಿ ಒಂದು ಚಿಕ್ಕ ತುಂಡನ್ನು ತಂದು ತನ್ನ ಹೂದೋಟದಲ್ಲಿ ನೆಟ್ಟಿದ್ದಾಳೆ. ಆದರೆ ಕೇವಲ ಎರಡೇ ವರ್ಷಗಳಲ್ಲಿ ಇದು ಗೌಡರ 5 ಎಕರೆ ತೋಟವನ್ನು ಆಕ್ರಮಿಸಿದೆ.ಕಿತ್ತು ತೆಗೆದ ಎರಡೇ ತಿಂಗಳಲ್ಲಿ ಮತ್ತೆ ಚಿಗುರೊಡೆದು ಹೋದೆಯ ಪಿಶಾಚಿ ಎಂದರೆ ಗವಾಕ್ಷಿಯಲ್ಲಿ ಬಂದೆ ಎನ್ನುತ್ತಿದೆ.

ತೋಟಗಾರಿಕಾ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದರೆ ಮಳೆಗಾಲದಲ್ಲಿ ಯಾವುದೇ ಕೀಟನಾಶಕದಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಕಾಂಡಗಳ ಮೂಲಕ ವಂಶಾಭಿವೃದ್ಧಿಯನ್ನು ಮಾಡುವ ಇವುಗಳು ರನ್ನರ್ ಗಳ ರೂಪದಲ್ಲಿ ಹರಡುತ್ತವೆ, ಈ ಗಿಡಗಳನ್ನು ಹುಲ್ಲು ಕತ್ತರಿಸುವ ಯಂತ್ರದಲ್ಲಿ ಕಟಾವು ಮಾಡಿದಾಗ ತಕ್ಕ ಮಟ್ಟಿನ ನಿಯಂತ್ರಣ ಕಂಡು ಬಂದರೂ ಶಾಶ್ವತವಾಗಿ ಇದರ ನಿರ್ನಾಮ ಸಾಧ್ಯವಿಲ್ಲ ಎನ್ನುತ್ತಾರೆ. ಮತ್ತು ಈ ಗಿಡಗಳು ತೋಟಕ್ಕೆ ಉತ್ತಮವಾದ ಗೊಬ್ಬರ ಎಂದು ಸಲಹೆ ನೀಡುತ್ತಾರೆ. ಆದರೆ ಇಲ್ಲಿನ ತೋಟಗಳು ಫಸಲಿನಲ್ಲಿ ದಿನದಿಂದ ದಿನಕ್ಕೆ ಕಳೆಗುಂದುತ್ತಿವೆ. ಈ ಕಾರ್ಮಿಕರ ಸಮಸ್ಯೆಯಲ್ಲಿ ಇಡೀ ತೋಟಕ್ಕೆ ಆಕ್ರಮಿಸಿದ ಈ ಕಳೆ ಕೀಳಲು ಸಾಧ್ಯವೇ ? ಅಥವಾ ಗಂಟೆಗೆ 150 ರೂ. ಬಾಡಿಗೆ ನೀಡಿ ಕಟಾವು ನಡೆಸಿದರೆ ಕೃಷಿಕನಿಗೆ ಸಿಗುವ ಪ್ರತಿಫಲವಾದರೂ ಏನು ?

ಅಡಿಕೆ, ತೆಂಗು, ಬಾಳೆ, ಕರಿಮೆಣಸನ್ನು ಮಿಶ್ರ ಬೆಳೆಯನ್ನಾಗಿ ಮಾಡುತ್ತಿರುವ ಪದ್ಮಯ್ಯ ಗೌಡರಿಗೆ ಇದೀಗ ಈ ಕಳೆಯು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. 2 ವರ್ಷಗಳಿಂದ 20ಕ್ಕಿಂತಲೂ ಹೆಚ್ಚು ಬಾರಿ ಈ ಕಳೆಯನ್ನು ಕಿತ್ತರೂ, ಇಲಾಖಾಧಿಕಾರಿಗಳನ್ನು ಭೇಟಿ ಮಾಡಿ ರಾಸಾಯನಿಕವನ್ನು ಸಿಂಪಡಿಸಿದರೂ ಪ್ರಯೋಜನ ದೊರೆಯದ್ದಿದ್ದಾಗ ಈ ಕೃಷಿ ಅವರಿಗೆ ಬೇಸರವನ್ನು ನೀಡಿದೆ.

ಈ ಕಳೆ ಗಿಡದ ಜೊತೆಗೆ ಈ ಪ್ರದೇಶದಲ್ಲಿ ಮರಗಳನ್ನು ಬಾಧಿಸುತ್ತಿರುವುದು ಬೇರು ಕೊರೆಯುವ ಹುಳುಗಳು. ಈ ಹುಳಗಳು ಇಂದು ಒಂದು ಮರವನ್ನು ಬಾಧಿಸಿದರೆ ಸೀಮಿತ ದಿನಗಳಲ್ಲೇ ಇವುಗಳು ಇಡೀ ತೋಟವನ್ನೇ ಸರ್ವನಾಶ ಮಾಡುತ್ತವೆ. ಯಾವುದೇ ರೀತಿಯ ಕೀಟನಾಶಕಗಳಿಂದಲೂ ಇವುಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಕೃಷಿಕರು ಪರಿತಪಿಸುತ್ತಿದ್ದಾರೆ.

ಗುಂಪಕಲ್ಲು ಪರಿಸರದ ಮತ್ತಾಯಿ, ಕುರಿಯಚ್ಚನ್ ಮತ್ತು ವರ್ಗೀಸ್ ರವರ ತೋಟವು ಈ ಹುಳಗಳಿಂದ ತೀವ್ರ ತೊಂದರೆಗಳೊಳಗಾಗಿದ್ದು ಸುಣ್ಣ, ಫೆರಡಾನ್, ಸಲ್ಫರ್ ನಂತಹ ಕೀಟನಾಶಕಗಳನ್ನು ಪ್ರಯೋಗಿಸಿದರೂ ಫಲಿತಾಂಶ ದೊರೆಯದೆ ಕೈ ಚೆಲ್ಲಿ ಕುಳಿತಿದ್ದಾರೆ. ಗೊಬ್ಬರ ಹುಳದಂತೆ ತೋರುವ ಈ ಹುಳಗಳು ಬೇರನ್ನು ಕೊರೆದು ತಿನ್ನುವುದರ ಮೂಲಕ ಕ್ರಮೇಣವಾಗಿ ಇಡೀ ಮರವನ್ನೇ ಸರ್ವನಾಶಗೊಳಿಸುತ್ತವೆ. ತೋಟಗಾರಿಕಾ ಇಲಾಖೆ ಈ ಕೂಡಲೇ ಈ ಬಗ್ಗೆ ಸಂಶೋಧನೆ ನಡೆಸಿ ತಕ್ಷಣಕ್ಕೆ ನಿಯಂತ್ರಣಗೊಳಿಸುವ ವ್ಯವಸ್ಥೆ ಮಾಡೀತೇ ? ಉತ್ತರಕ್ಕೆ ಕಾಯಬೇಕಷ್ಟೆ.
ಹಕ್ಕು ನಿರಾಕರಣೆ