ಸಾವಿರ ಬಂಧುಗಳಿದ್ದರೂ ನಾನು ಒಂಟಿ
ಕೈ ತುಂಬ ಇದ್ದಾಗ ಮನೆ ತುಂಬ ನೆಂಟರು... ಅನ್ನುವ ಜಗತ್ತಿನ ಸತ್ಯಕ್ಕೆ ನಾನೇ ಮೂಕ ಸಾಕ್ಷಿ. ಕೆಲವೇ ತಿಂಗಳ ಹಿಂದೆ ನಾನು ಸಮೃದ್ದಿಯಿಂದ ತುಂಬಿ ತುಳುಕುತ್ತಿದ್ದೆ. ಮೈತುಂಬ ಎಲೆಗಳು, ಬಳ್ಳಿಗಳು, ನನ್ನ ಸುತ್ತಮುತ್ತಲೂ ನನ್ನಷ್ಟೇ ಸಮೃದ್ದ ಬದುಕು ಇತ್ತು. ನನ್ನ ಜೀವದೊಳಗೆ ಹಕ್ಕಿಗಳ ಕಲರವಿತ್ತು. ಅಳಿಲು ಅರಣೆಯ ಸಹಿತ ಸಣ್ಣ ಪುಟ್ಟ ಪ್ರಾಣಿಗಳ ಓಡಾಟವಿತ್ತು. ಗಾಳಿಯಲ್ಲಿ ಓಡಾಡುವ ನನ್ನ ಮೈಯಲ್ಲಿ ಬಳುಕುತನವಿತ್ತು. ನನ್ನ ನೆರಳಿನಲ್ಲಿ ಅದೆಷ್ಟೋ ಜನ ನೆಮ್ಮದಿ ಪಡೆಯುತ್ತಿದ್ದರು. ನಾನೂ ಖುಷಯಿಂದಿದ್ದೆ. ಆದರೆ, ಈ ಮಳೆಗಾಲ ಆರಂಭಕ್ಕೆ ಮೊದಲು ಬಡಿದ ಸಿಡಿಲು ನನ್ನನ್ನು ಸಂಪೂರ್ಣ ಸುಟ್ಟು ಹಾಕಿದೆ. ನನ್ನ ಎಲೆಗಳು ಸತ್ತು ಹೋದವು. ಟೊಂಗೆ, ಬಳ್ಳಿಗಳೆಲ್ಲ ನಿಧಾನಕ್ಕೆ ಜೀವ ಕಳೆದುಕೊಂಡವು. ನಾನು ಬದುಕಿದ್ದೇನಾ? ನನಗೇ ಗೊತ್ತಿಲ್ಲ. ಈಗ ನನ್ನ ಹೃದಯದೊಳಗೆ ಹಕ್ಕಿಗಳು ಹಾಡುವುದಿಲ್ಲ, ಅವುಗಳ ಮಧುರ ಕಲರವವಿಲ್ಲ. ಬೋಳು ಬೋಳಾಗಿರುವ ನನ್ನ ಅಡಿಯಲ್ಲಿ ಯಾರೂ ಬಂದು ನಿಲ್ಲುವುದಿಲ್ಲ. ಎತ್ತರದಿಂದ ಸುತ್ತಲಿನ ಹಸಿರು ಕಂಡು ನಾನು ಮಮ್ಮಲಮರುಗುತ್ತಿದ್ದೇನೆ. ಆದರೆ ಸಾಂತ್ವನ ಹೇಳೋರು ಯಾರೂ ಇಲ್ಲ. ಸುತ್ತ ಮುತ್ತ ಸಾವಿರ ಬಂಧುಗಳಿದ್ದರೂ ನಾನೀಗ ಒಂಟಿ...ಒಂಟಿ...
ನನ್ನನ್ನೊಮ್ಮೆ ಬಂದು ನೋಡುತ್ತೇನೆ ಎಂದು ನೀವು ಬಯಸಿದರೂ ಆಗ ನಾನಿರುತ್ತೇನೋ ಇಲ್ಲವೋ ಗೊತ್ತಿಲ್ಲ...
ಇಂತೀ,
ಸಿಡಿಲು ಬಡಿದ ಒಂಟಿ ಮರ
ಪಟ್ಟೂರು ಶಾಲೆಯ ಸಮೀಪ, ಪಟ್ರಮೆ ಗ್ರಾಮ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ.