ಪಾಪ! ನನ್ನ ಚಿನ್ನು ಒಂಟಿಯಾದಾಳೇ.......?
ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ...
ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಕ್ಷಮಿಸೇ....!!!!
ಹೌದು, ನನ್ನ 'ಸೃಷ್ಟಿ' ಪ್ರತಿ ಕ್ಷಣ ಈ ಹಾಡನ್ನು ಗುನುಗುತ್ತಾ ಇದ್ದಳು. ಈ ಹಾಡೇ ಆಕೆಯ ಜೀವನದ ಎಸಳೋ ಅನ್ನುವ ರೀತಿ ನಡೆದು ಕೊಳ್ಳುತ್ತಿದ್ದಳು. ಹಾಗೆ ಗುನುಗಲು ಆಕೆಗೆ ಕಾರಣವೂ ಇತ್ತು. ಯಾವತ್ತೂ ಆಕರ್ಷಣೆಯ ಕಡೆ ಮುಖ ಮಾಡದಿದ್ದ ನನ್ನ ಸೃಷ್ಟಿ ಅದ್ಯಾವುದೋ ಅನಿರೀಕ್ಷಿತವಾಗಿ ಬೀಸಿದ ಬಿರುಗಾಳಿಗೆ ತಲೆಯೊಡ್ಡಿ ಸಾಗುವಾಗ 'ಸುಹಾಸ್' ನ ಪರಿಚಯವಾಯಿತು.
ಎಳೆಯ ವಯಸ್ಸಿನಲ್ಲಿಯೇ ಅನುಭವಿಸಲಾರದ ನೋವನ್ನು ಕಂಡಿದ್ದ ನನ್ನ ಸೃಷ್ಟಿಗೆ ಸುಹಾಸ್ ನ ಸ್ನೇಹ ಪ್ರೀತಿಯಾಗಿ ಕಾಣತೊಡಗಿತು. ಪ್ರಪಂಚದ ಅರಿವೇ ಇಲ್ಲದಂತೆ ಪ್ರೀತಿಸಲಾರಂಭಿಸಿದರು.ಒಂದೊಮ್ಮೆಗೆ ಅಲೆಗಳ ಹೊಡೆತಕ್ಕೆ ಸಿಕ್ಕಿದ ದೋಣಿ ಯಾವ ರೀತಿ ತನ್ನ ಚಲನೆಯಲ್ಲಿ ಏರುಪೇರನ್ನು ಹೊಂದುವುದೋ ಅದೇ ರೀತಿ ನನ್ನ ಸೃಷ್ಟಿ ಮತ್ತು ಸುಹಾಸ್ ನ ಪ್ರಣಯ ಕಾಲದಲ್ಲೂ ಏರುಪೇರು ಕಾಣುತ್ತಿತ್ತು. ಆದರೆ ಆಕೆಯ ಸುಹಾಸ್ ತುಂಬಾ ಮುಂಗೋಪಿಯಾದರೂ ಕೋಪ ಕಡಿಮೆಯಾದಾಗ ತನ್ನನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಾನೆ ಅನ್ನುವ ನಂಬಿಕೆ ನನ್ನ ಸೃಷ್ಟಿಯದ್ದು. ತನ್ನನ್ನು ಬೈಯುವ, ಹೊಡೆಯುವ ಹಕ್ಕು ಆತನಿಗೆ ಒಬ್ಬನಿಗಲ್ಲವೇ ಎನ್ನುತ್ತಾ ಸುಮ್ಮನಾಗುತ್ತಿದ್ದಳು.
ನನ್ನ ಸೃಷ್ಟಿ ಜಾಣೆ ಆಕೆ ಪ್ರತಿ ಭಾರಿ ಸುಹಾಸ್ ನಲ್ಲಿ ಭವಿಷ್ಯದ ಬಗ್ಗೆಯೇ ಮಾತಿನ ಪ್ರಸ್ತಾಪನೆಯನ್ನು ಇಡುತ್ತಿದ್ದಳು. ಅದೆಲ್ಲ ಈಗ ಯಾಕೆ ? ನಮಗಿನ್ನು ಎಳೆಯ ವಯಸ್ಸು, ಅದರ ಬಗ್ಗೆ ಯೋಚಿಸಿ ತಲೆ ಕೆಡಿಸಿಕೊಳ್ಳುವುದು ಬೇಡ, ನಾನು ಎಂದಿಗೂ ನಿನ್ನವನೇ ಅಷ್ಟು ನಂಬಿಕೆ ಇಡು ಸಾಕು, ಐದು ವರುಷಗಳವರೆಗೆ ನೀನು ನನಗೆ ಕಾಯವುದಾದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಅಡ್ಡ ಗೋಡೆಗೆ ದೀಪ ಇಟ್ಟ ಹಾಗೆ ಹೇಳಿದ್ದ. ಪಾಪ! ಭವಿಷ್ಯದ ಬಗ್ಗೆ ಸರಿಯಾಗಿ ನಿಲುವು ತೆಗೆದುಕೊಳ್ಳಬೇಕಾದವನೇ ಹಾಗೆಂದಾಗ ನನ್ನ ಸೃಷ್ಟಿ ಏನು ಮಾಡಲು ಸಾಧ್ಯ.
ಸುಹಾಸ್ ತನಗೆ ಮೋಸ ಮಾಡಲಿಕ್ಕಿಲ್ಲ ಎನ್ನುವ ನಂಬಿಕೆಯಿಂದ ಸೃಷ್ಟಿ ಆತನನ್ನು ಪೂರ್ತಿಯಾಗಿ ನಂಬಿದ್ದಳು. ಆತ ಆಕೆಯನ್ನು 'ಚಿನ್ನು' ಎಂದು ಕರೆದರೆ ಆಕೆ ಆತನನ್ನು 'ಮುದ್ದು' ಎಂದು ಪ್ರೀತಿಯಿಂದ ಕರೆದುಕೊಳ್ಳುತ್ತಿದ್ದರು. ಎಷ್ಟೋ ಬಾರಿ ಆತ ಆಕೆಯಲ್ಲಿ ನನ್ನ ಚಿನ್ನು ಹುಷಾರಾಗ್ಬೇಕು, ಎಲ್ಲದರಲ್ಲೂ ಫಸ್ಟ್ ಬರ್ಬೇಕು, ಯಾವುದೇ ಕಾರಣಕ್ಕೂ ಅಳ್ಬಾರ್ದು, ಒಳ್ಳೆ ಕೆಲಸ ಸುಖವಾಗಿರಬೇಕು ಎನ್ನುವ ಧೈರ್ಯದ ಮಾತನ್ನು ಉಪದೇಶವಾಗಿ ನೀಡುತ್ತಿದ್ದ. ಅವನ ಈ ರೀತಿಯ ಮಾತುಗಳೇ ಆಕೆಗೆ ಪೂರ್ತಿ ವಿಶ್ವಾಸವನ್ನು ಇಡಲು ನಾಂದಿಯಾಯಿತೋ ಏನೋ ? ಹೀಗೆಯೇ 'ಚಿನ್ನು-ಮುದ್ದು' ಪ್ರೀತಿಯ ಕಡಲಲ್ಲಿ ತೇಲುತ್ತಾ ಇದ್ದರು.
ಹೀಗಿರಲು ಒಂದು ದಿನ........ ನನಗಿನ್ನು ಸರಿ ನೆನಪಿದೆ. ಅಂದು ಮಳೆಗಾಲದೊಂದು ತಿಂಗಳಿನ 20ನೇ ತಾರೀಖು. ಸೃಷ್ಟಿ ಮತ್ತು ನಾನು ಎಂದಿನಂತೆ ಆಫೀಸಿಗೆ ಹೋದೆವು. ಮಧ್ಯಾಹ್ನದ ಸಮಯ ಸೃಷ್ಟಿಯ ಜಂಗಮ ಘಂಟೆ ರಿಂಗಣಿಸಿತು. ಮಾತನಾಡುತ್ತಿದ್ದಂತೆಯೇ ಸೃಷ್ಟಿ ಆತಂಕಕ್ಕೆ ಒಳಗಾದಳು. ನೇರವಾಗಿ ಹೊರನಡೆದಳು. ನಾನು ಆಕೆಯನ್ನು ಹಿಂಬಾಲಿಸಿದೆ. ತಕ್ಷಣ 'ನೋ..........' ಎನ್ನುವ ಚಿತ್ಕಾರ ಸೃಷ್ಟಿಯ ಬಾಯಿಯಿಂದ ಬಂತು. ನನಗೆ ದಿಗಿಲಾಯಿತು. ಆಕೆ ಯಾವತ್ತೂ ಈ ರೀತಿ ನಡೆದುಕೊಂಡವಳಲ್ಲ. ಒಂದು ರೀತಿಯ ವಿಚಿತ್ರ ವರ್ತನೆಯನ್ನು ನಾನು ಅವಳಲ್ಲಿ ಕಂಡೆ. ನನ್ನನ್ನು ಕಂಡವಳೇ ಎಳೆಯ ಕಂದ ಅಮ್ಮನನ್ನು ಯಾವ ರೀತಿ ಅಪ್ಪುವುದೋ ಅದೇ ರೀತಿ ನನ್ನನ್ನು ಅಪ್ಪಿ ಹಿಡಿದು ರೋಧಿಸಿದಳು. ನಿಧಾನವಾಗಿ ವಿಚಾರಿಸಿದೆ. ನಿಜಾಂಶ ಹೊರಬಂತು. ಪಾಪ! ನನ್ನ ಸೃಷ್ಟಿಯನ್ನು ಸುಹಾಸ್ ಬರೇ ದೇಹ ಸುಖಕ್ಕಾಗಿ ಪ್ರೀತಿಸುವುದಾಗಿಯೂ, ಈ ಹಿಂದೆಯೇ ಆತ ತನ್ನ ಕಾಮ ತೃಷೆಗಾಗಿ ಅನೇಕ ಹೆಂಗಳೆಯರನ್ನು ಬಳಸಿಕೊಂಡಿರುವ ವಿಚಾರ ಆಕೆಗೆ ಬಲ್ಲ ಮೂಲಗಳಿಂದ ಬಂದುದನ್ನು ನನ್ನಲ್ಲಿ ಬಿಕ್ಕಳಿಸುತ್ತಾ ನುಡಿದಳು.
ಯಾವುದೇ ಹೆಣ್ಣಾಗಲಿ ತನ್ನನ್ನು ಪ್ರೀತಿಸುವ, ತನ್ನ ಜೊತೆ ಸಂಸಾರ ಮಾಡಲಿರುವ ಹುಡುಗ ಅನ್ಯ ಸ್ತ್ರೀಯ ಜೊತೆ ಸಂಪರ್ಕ ಇರಿಸಿಕೊಂಡಿದ್ದ ಎಂದರೆ ಸಹಿಸಲು ಸಾಧ್ಯವೇ ? ತನಗೆ ಸುಹಾಸ್ ನ ನಡವಳಿಕೆ ಬಗ್ಗೆ ಸಿಕ್ಕ ಮಾಹಿತಿಯ ಬಗ್ಗೆ ಸರಿಯಾದ ವಿಚಾರವನ್ನು ನಡೆಸಿದ ಸೃಷ್ಟಿ ಆತನ ಅಸಂಬದ್ಧ ವರ್ತನೆಗಳ ಬಲೆಯನ್ನು ಎಳೆ ಎಳೆಯಾಗಿ ಬಿಡಿಸಿ ಪರಾಮರ್ಶಿಸಿದಳು ಆಕೆ ಆತನ ಮೇಲೆ ಇಟ್ಟದ್ದ ಅತಿಯಾದ ನಂಬಿಕೆಯೇ ಆಕೆಯನ್ನು ಇಂದು ಕಂಗೆಡಿಸಿತು. ಈ ಜನ್ಮದಲ್ಲಿ ಆ ಸುಹಾಸ್ ನ ಜೊತೆ ತಾನು ಸಂಸಾರ ನಡೆಸುವ ವಿಚಾರ ಬರೇ ಕನಸಿನ ಮಾತೆಂದು ನಿರ್ಧರಿಸಿ, ಫೋನನ್ನು ಕೈಗೆತ್ತಿಕೊಂಡವಳೇ ಸುಹಾಸ್ ನ ವರ್ತನೆಗೆ ಯದ್ವಾ ತದ್ವಾ ಕೂಗಾಡಿದಳು. ಅವನಿಗೀಗ ಸೃಷ್ಟಿಯನ್ನು ಬಿಟ್ಟು ಬದುಕುವ ಶಕ್ತಿ ಇದೆ.
ಆದರೆ ಒಂದು ಕ್ಷಣನೂ ಸುಹಾಸ್ ನನ್ನು ಬಿಟ್ಟಿಲಾರದ ಸೃಷ್ಟಿ ಈಗ ದಿಕ್ಕೇ ತೋಚದಂತಾಗಿದ್ದಾಳೆ. ಆಘಾತಗೊಳಗಾದ ಸೃಷ್ಟಿ ವಾಸ್ತವದ ಅರಿವೇ ಇಲ್ಲದವಳಂತೆ ಒಂದೇ ಕಡೆಗೆ ನೇರವಾದ ದೃಷ್ಟಿಯನ್ನು ಹರಿಸಿ ಜೀವಂತ ಶವವಾಗಿ ಬಿಟ್ಟಿದ್ದಾಳೆ. ತನ್ನ ಸುಹಾಸ್ ಸರಿಯಾಗಲು ಸಾಧ್ಯವೇ ಇಲ್ಲವೆಂದು ಗೊತ್ತಿದ್ದರೂ ಕೂಡಾ ಆತನೊಂದಿಗೆ ಕಳೆದ ದಿನಗಳನ್ನೇ ಮತ್ತೆ ಮತ್ತೆ ನೆನೆಯುತ್ತಾ ಕಂಬನಿ ಮಿಡಿಯುತ್ತಿದ್ದಾಳೆ. ಅನ್ನ ಬಿಟ್ಟು ಹೊಟ್ಟೆಗೆ ಮೋಸ ಮಾಡುತ್ತಿದ್ದಾಳೆ. ಅಂದು ಪ್ರೀತಿಯ ಕಡಲಲ್ಲಿ ಜೊತೆಯಾಗಿ ಸಾಗಿದ 'ಸೃಷ್ಟಿ-ಸುಹಾಸ್' ಇಂದು ಸೃಷ್ಟಿಯನ್ನೊಬ್ಬಳನ್ನೇ ಪಯಣಿಸುವಂತೆ ಮಾಡಿದ್ದಾನೆ. ಸುಹಾಸ್ ಮತ್ತೆಂದೂ ಬರಲಾರ ಎಂದು ಗೊತ್ತಿದ್ದರೂ ಸೃಷ್ಟಿ ಆತನಿಗಾಗಿ ಕಾಯುತ್ತಿರುವ ಹಾಗೆ ತೋಚುತ್ತಿದೆ. ಸುಹಾಸ್ ತನ್ನ ವರ್ತನೆಯನ್ನು ಬದಲಿಸಿ ಮತ್ತೆ ಸೃಷ್ಟಿಯನ್ನು ಕೂಡಿ ಸಂಸಾರ ನಡೆಸಿಯಾನೇ ? ಆಗ ನನ್ನ ಚಿನ್ನು ಆತನನ್ನು ಒಪ್ಪಿಯಾಳೇ ? ಅಥವಾ ಪಾಪ ನನ್ನ ಚಿನ್ನು ಒಂಟಿಯಾದಾಳೇ ?.. ಕಾಲದ ಮೊರೆ ಹೋಗಬೇಕಷ್ಟೆ.
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು