Welcome, Guest   [ Register | Sign In | Take a tour | Adult Filter: On ]

ನಿನ್ನ ನೋಡಲೆಂತೋ........

ಹಾಯ್ ಚಿನ್ನು ಹೇಗಿದ್ದೀಯಾ ?

ತುಂಬ ದಿನ ಆಯ್ತು ಅಲ್ವಾ ನಿನ್ನನ್ನು ನೋಡದೆ, ಇತ್ತೀಚೆಗೆ ನಿಂಗೂ ಪುರುಸೊತ್ತಿಲ್ಲ ಹಂಗಾಗಿ ನಿನ್ನನ್ನು ಮೀಟ್ ಮಾಡೋಕೆ ಆಗ್ತಾನೆ ಇಲ್ಲ. ಈ ಹಾಳಾದ ಜನ ನಮ್ಮ ಪರಿಸರವನ್ನೆಲ್ಲ ಹಾಳು ಮಾಡಿ ಹಾಕ್ಬಿಟ್ರು ನೋಡು, ಆದ ಕಾರಣ ನಂಗೆ ನಿನ್ನ ಜತೆ ಸಂಪರ್ಕ ಇಟ್ಟು ಕೊಳ್ಳೋಕೆ ಸ್ವಲ್ಪ ಕಷ್ಟಾನೇ ಆಯ್ತು. ಬಿಸಿಲಿಗೆ ಒಳಗಿನಿಂದ ಹೊರಗೆ ಬರೋಕು ನಂಗೆ ಆಗ್ತಾ ಇಲ್ಲ. ಈ ಸೆಖೆಗೆ ಒಂದು ತೊಟ್ಟು ನೀರೂ ಇಲ್ಲದೆ ಒಣಗಿ ಒಣಗಿ ಕಪ್ಪಾಗಿ ಹೋಗಿದ್ದೇನೆ. ನಿನ್ನನ್ನು ನೋಡ್ಬೇಕು ಅನ್ನೋ ಧಾವಂತ ಮಾತ್ರ ನನ್ನಲ್ಲಿ ದಿನೇ ದಿನೇ ಹೆಚ್ತಾನೆ ಇದೆ.

ನಿಂಗಾದ್ರೆ ಮನೆಯವರು ಓಡಾಡೋಕೆ ಅಂತ ಸ್ಕೂಟಿ ತೆಗ್ದು ಕೊಟ್ರು. ಆದ್ರೆ ನಂಗೆ ಹಾಗೇನಾ ? ನಾನೊಂದು ವೇಳೆ ನಿನ್ನ ಕಣ್ಣ ಮುಂದೆ ಕಂಡರೂ ಕೂಡಾ ನೀನ್ ನಂಗೆ ಮುಖ ತೋರಿಸದೆ ಫಾಸ್ಟ್ ಆಗಿ ರೈಡ್ ಮಾಡ್ಕೊಂಡು ಹೋಗ್ತಿ ಅಲ್ವಾ ? ಯಾಕೆ ನಿಂಗೆ ನನ್ನನ್ನು ಕಂಡ್ರೆ ಭಯನಾ ?

ಮೊನ್ನೆ ಒಂದಿನ ಬೆಳ್ಳಂಬೆಳಗ್ಗೆ ನೀನು ಚಾವಡಿಯಲ್ಲಿ ಕುರ್ಚಿ ಮೇಲೆ ಕುಳಿತು ಆರಾಮವಾಗಿ ಟಿವಿ ನೋಡ್ತಾ ಇರೋವಾಗ ನಾನಗ ಮೆಲ್ಲಗೆ ನಿಮ್ಮ ಹಿತ್ತಿಲನ್ನು ದಾಟಿ ಅಂಗಳಕ್ಕೆ ಬಂದಾಗ ನೀನು ಅಮ್ಮಾ...... ಅಂತ ಕಿರುಚಿದ್ದು, ಅಮ್ಮ ಬಂದು ತಲುಪೋದರೊಳಗೆ ನೀನು ಅಲ್ಲಿಂದ ಕಾಲ್ಕಿತ್ತಿದ್ದು ಆಮೇಲೆ ಏನಾಯ್ತೋ ಗೊತ್ತಿಲ್ಲ. ಮೋಸ್ಟ್ಲೀ ನಿಮ್ಮಮ್ಮ ನಿಂಗೆ ಬೈದಿರ್ಬೇಕು ಅಲ್ವಾ ? ನಿಂಗೆ ಒಂದು ನೆನಪಿದ್ಯಾ ? ನಿಮ್ಮ ಅಮ್ಮ ಮನೇಲಿ ಇಲ್ಲದ ದಿನ ನೀನು ಅನ್ನ ಮಾಡೋಕೆ ಅಂತ ಅಡುಗೆ ಮನೆಗೆ ಬಂದಾಗ ಪಕ್ಕದಲ್ಲೇ ಇದ್ದ ನಿನ್ನ ಬರೆಯೋ ರೂಮ್ ನಲ್ಲಿರೋ ಡೆಸ್ಕ್ ನ ಅಡಿಯಿಂದ ನಾನು ಸುರ್ರಂತ ಓಡಿ ಹೋದಾಗ ನೀನು ಅಪ್ಪಾ....... ಅಂತ ಕೂಗಿದ್ದು, ನಿದ್ದೆಯಿಂದ ಎದ್ದು ಓಡಿ ಬಂದ ನಿನ್ನ ಅಪ್ಪ ನಿಂಗೆ ಜೋರು ಮಾಡಿದ್ದು, ನೀನು ಆಗ ಜೋರಾಗಿ ಅತ್ತದ್ದು, ನಾನಾಗ ತೆಂಗಿನ ರಾಶಿಯ ಮೂಲೆಯಲ್ಲಿ ಕುಳಿತು ಹಲ್ಲು ಕಾಣಿಸದ ರೀತಿಯಲ್ಲಿ ನಕ್ಕಿದ್ದು, ವ್ಹಾ ಏನು ಮಜಾ ಅಲ್ವಾ ?

ಏನು ಮಾಡೋದು ಹೇಳು ನಂಗೆ ನೀನು ಅಂದ್ರೆ ತುಂಬಾ ಪ್ರೀತಿ, ಆದ್ರೆ ನಿಂಗೆ ಯಾಕೋ ನನ್ನನ್ನು ಕಂಡ್ರೆ ಇಷ್ಟಾನೆ ಇಲ್ಲ ಅಂತ ಅನ್ಸುತ್ತೆ. ನಿಮ್ಮ ಮೇಲೆ ಪ್ರೀತಿ ಇಟ್ಟು ನಿಮ್ಮ ಮನೆಗಳಿಗೆ ನಾವು ಅಪರೂಪಕ್ಕೊಮ್ಮೆ ಬರ್ತಾ ಇರ್ತೇವೆ. ಅದನ್ನು ಕೂಡಾ ನೀವು ತಡೆಯೋಕೆ ಹೋದ್ರೆ ನಮ್ಮವರ ಗತಿ ಏನು ? ನಮ್ಮನ್ನು ನಿಮ್ಮಿಂದ ದೂರ ಮಾಡಿದ್ರೆ ನಾವು ಎಲ್ಲಿ ಅಂತ ಬದುಕೋದು ಹೇಳು. ನಮ್ಮಗಳ ಜತೆ ಪ್ರೀತಿಯಿಂದ ಬಾಳಿದಾಗ ಮಾತ್ರ ನಿಮ್ಮ ಬದುಕು ಸಾರ್ಥಕ ಅನ್ಸೋದು ತಿಳ್ಕೋ. ಇನ್ನಾದ್ರೂ ನಾನು-ನೀನು ಫ್ರೆಂಡ್ಸ್ ಪ್ರೀತಿಯಿಂದ ಜೀವನ ಸಾಗಿಸೋಣ ಆಗದಾ ? ಏನ್ ಹೇಳ್ತೀಯಾ ?


ಮುದ್ದಿನಿಂದ ನಿನ್ನ ಫ್ರೆಂಡ್
ಕೇರೆ ಹಾವು








ಪ್ರತಿಸ್ಪಂದನಗಳು

Re: ನಿನ್ನ ನೋಡಲೆಂತೋ........
ಯೇ ಕೇರೆ ಹಾವು..ಸ್ವಲ್ಪ ಲಿಫ್ಟಿಕ್ ಹಾಕಿ ಅಂಗಿ ಹಾಕಿ ಬಾ ಆಗ ನಿನ್ನ ಗೆಳತಿ/ಗೆಳೆಯ ಹತ್ತಿರ ಬರುತ್ತಾರೆ..ಇಲ್ಲಾಂದ್ರೆ ಅವರಿಗೆ ನಾಚ್ಕೆ ಆಗಲ್ಲವಾ ?
Re: ನಿನ್ನ ನೋಡಲೆಂತೋ........
kereg ninkulu panda ishtagere.. ninkuleg jaye podige? kalpane beautiful.. kushi aan.
Re: ನಿನ್ನ ನೋಡಲೆಂತೋ........
ಗ್ರಾಮೀಣ ಪ್ರದೇಶದ‌ಗಳಲ್ಲಿ ಈ ಕೆರೆ ಹಾವುಗಳು ಅಪರೂಪದ ಅತಿಥಿಗಳೇನಲ್ಲ, ಆದರೆ ನಿಮ್ಮ ಕಲ್ಪನೆಯ ಮೂಸೆಯೊಳಗೆ ಸರ ಸರ ಸರಿದಾಡುವ ಸರೀಸೃಪವೊಂದು ಲಘು ಬರಹ ರೂಪ ಪಡೆದು ಬಂದದ್ದು ಓದಿ ಖುಷಿ ಆನ್... ಸಾಹಿತ್ಯಗೋಷ್ಠಿಯಲ್ಲಿ ಚುರುಮುರಿ ತಿಂದ ಅನುಭವವಾಯ್ತು... ಲಕ್ಕಿ ಕೇರೆ ಅವು!!!!!!
ಹಕ್ಕು ನಿರಾಕರಣೆ