Welcome, Guest   [ Register | Sign In | Take a tour | Adult Filter: On ]

ಮನಸ್ಸಿಗೆ ಕಚಗುಳಿ ಇಡುವ ರಂಗವಲ್ಲಿ ಚಿತ್ತಾರ

ಜಾಗತೀಕ ಯುಗದಲ್ಲಿ ಕಾಂಕ್ರೀಟ್ ಕಾಡುಗಳ ಅಟ್ಟಹಾಸದ ನಡುವೆ ನಾವೆಲ್ಲೋ ನಮ್ಮ ಸಂಸ್ಕೃತಿಯನ್ನು ಮರೆತು ಹೋಗಿದ್ದೇವೆ ಎಂದು ಅನ್ನಿಸುತ್ತಿತ್ತು, ವಾಸ್ತವವಾಗಿ ನೋಡಿದಾಗ ಆ ಮಾತು ನಿಜವೇ ಸರಿ. ಏಕೆಂದರೆ ಆಫೀಸುಗಳೇ ಮನೆಯಾಗಿರುವ ಹೆಚ್ಚಿನ ಉದ್ಯೋಗಿಗಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಯೋಚಿಸಲು ಅಸಾಧ್ಯದ ಮಾತು. ಆದರೆ, ಎಲ್ಲೋ ಅಲ್ಪ ಸ್ವಲ್ಪ ಧಾರ್ಮಿಕ ಸಂಸ್ಕೃತಿಗಳು ಇಂದು ನಮ್ಮೊಂದಿಗೆ ಇದ್ದಾವೆ ಎಂದರೆ ಅದು ನಿಜಕ್ಕೂ ಅಚ್ಚರಿ ಮೂಡಿಸುವ ವಿಚಾರವಾಗಿದ್ದು ಅಂತೆಯೇ ನಮ್ಮ ಜನರು ಅದನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಂಡು ಬಂದಿರುವುದೂ ಹೌದು. ಇಂತಹ ಒಂದು ವಿಶಿಷ್ಟ ಸಂಸ್ಕೃತಿಯಲ್ಲಿ ಹಿರಿಯ ಸ್ಥಾನದಲ್ಲಿ ಇಂದು ಎಲ್ಲೆಡೆ ಕಂಗೊಳಿಸುತ್ತಿರುವುದು ರಂಗವಲ್ಲಿ.

ರಂಗವಲ್ಲಿಗಳನ್ನು ನೋಡಿದಾಗ ಒಂದು ಕ್ಷಣ ನಮ್ಮ ಮೈ ನವಿರೇಳುತ್ತದೆ. ಮುದುಡಿಕೊಂಡಿದ್ದ ಮನಸ್ಸುಗಳನ್ನು ಯಾವುದೋ ಅನಂತವಾದ ದಿಗಂತದಾಚೆ ಸೆಳೆದೊಯ್ಯುತ್ತದೆ. ಇಂಥಹ ಅಪರೂಪದ ಶಕ್ತಿಯನ್ನು ಹೊಂದಿದ ಈ ರಂಗವಲ್ಲಿಗಳು ಇಂದು ನಮ್ಮಲ್ಲಿ ಉಳಿದುಕೊಂಡಿದೆ ಅನ್ನುವಾಗ ನಮ್ಮ ಬೆನ್ನನ್ನೆ ನಾವು ತಟ್ಟಿಕೊಳ್ಳುವ ಎಂದೆನಿಸುತ್ತದೆ. ಈ ರಂಗವಲ್ಲಿಗಳು ಬರೇ ಸಂಸ್ಕೃತಿಯಾಗಿರದೆ ಕಲೆಯಾಗಿಯೂ ಜೀವಂತಿಕೆಯನ್ನು ಪಡೆದು ಕೊಂಡಿದೆ.

ಪುರಾಣಗಳಲ್ಲಿ ಇದರ ಹಿನ್ನೆಲೆಯನ್ನು ನೋಡಿದಾಗ ಋಷಿ ಮುನಿಗಳು ದೇವರ ಅರ್ಚನೆಗೆ ಯಾವಾಗ ಮಂತ್ರಗಳನ್ನು ಆರಂಭಿಸಿದರೋ ಅದೇ ಸಂದರ್ಭದಲ್ಲಿ ಈ ರಂಗವಲ್ಲಿಗಳ ಉಗಮವಾಯಿತಂತೆ, ಆಗಿನ ಕಾಲದಲ್ಲಿ ಇದನ್ನು ರಂಗವಲ್ಲಿಗಳು ಎಂದು ಕರೆಯದೆ ಮಂಡಲಗಳು ಎನ್ನುವ ಹೆಸರಿನಿಂದ ಕರೆಯುತ್ತಿದ್ದೂ, ಇದರ ಸೃಷ್ಟಿ ಚುಕ್ಕಿಗಳಿಂದ ಆಗಿರುವ ಕಾರಣ, ಈ ಚುಕ್ಕಿಗಳು ನವಗ್ರಹಗಳನ್ನು ಸೂಚಿಸುತ್ತವೆ ಅನ್ನುವ ನಂಬಿಕೆ ಇದೆ. ಅದಲ್ಲದೆ ನಕ್ಷತ್ರಗಳು ಕೂಡಾ ಮಂಡಲ ಆಕಾರವನ್ನು ಹೊಂದಿರುವುದರಿಂದಲೂ ಇದನ್ನು ಮಂಡಲ ಎಂದು ಕರೆಯುವರು.

ಹೀಗೆ ಹುಟ್ಟಿಕೊಂಡ ರಂಗವಲ್ಲಿಯನ್ನು ನಾವು ನಮ್ಮ ಮನೆಯ ಬಾಗಿಲಿನ ಮುಂದೆ ಹಾಕಿದಾಗ ಇದು ಭೂಮಿಯಲ್ಲಿರುವ ಕಾಂತೀಯ ಶಕ್ತಿಗಳನ್ನು ಆಕರ್ಷಿಸಿಕೊಂಡು, ಕಪ್ಪು ರೂಪದಲ್ಲಿ ಕಂಡುಬರುವ ದುಷ್ಟಶಕ್ತಿಗಳನ್ನು ತಡೆಯುತ್ತದೆ ಎನ್ನುವ ನಂಬಿಕೆಯಿದೆ. ನಿರ್ದಿಷ್ಟವಾದ ಚೌಕಟ್ಟನ್ನು ( ಆಯಾ) ಹೊಂದಿರುವ ಈ ರಂಗೋಲಿ ಕೇವಲ ಕಣ್ಣಿಗೆ ಆಕರ್ಷಣೆಯನ್ನು ನೀಡತ್ತದೆ. ಅಷ್ಟೇ ಅಲ್ಲದೆ ಪ್ರತಿಯೊಂದು ದೇವತಾ ಕಾರ್ಯದಲ್ಲೂ ವಿಭಿನ್ನವಾದ ಮಂಡಲಗಳನ್ನು ಹಾಕುವ ಸಂಪ್ರದಾಯವಿದ್ದು, ಯಾವುದೇ ಪೂಜೆಯನ್ನು ಮಾಡಿದರು ಅದಕ್ಕೆ ನಿಶ್ಚಿತವಾದ ಮಂಡಲಗಳಿರುತ್ತವೆ. ಪ್ರತಿಯೊಂದು ಮಂಡಲಗಳೂ ಆಯಾಯ ದೇವರ ಮಹಿಮೆಯನ್ನು ಸಾರುವಂತಾಗಿರುತ್ತದೆ.

ಕೆಲವು ಕಥೆಗಳ ಪ್ರಕಾರ ಆಯುಷ್ಯ ಮುಗಿದೊಡನೆ ಜೀವಾತ್ಮವನ್ನು ಕರೆದೊಯ್ಯಲು ಭೂಮಿಗೆ ಬಂದಂತಹ ಯಮಧರ್ಮರಾಯ , ಒಮ್ಮೆ ಪತಿವ್ರತೆಯಾಬ್ಬಳ ಪತಿಯ ಪ್ರಾಣವನ್ನು ಕೊಂಡೊಯ್ಯಲು ಸೂರ್ಯೋದಯದ ವೇಳೆಗೇ ಪ್ರತ್ಯಕ್ಷನಾದನಂತೆ. ಆ ಸಮಯದಲ್ಲೇ, ಸ್ನಾನ ಮಾಡಿ, ಮನೆಯ ಮುಂದೆ ಕಸ ಗುಡಿಸಿ, ಸಾರಿಸಿ ಸುಂದರವಾಗಿ ರಂಗೋಲಿ ಇಟ್ಟಿದ್ದ ಆ ಪತಿವ್ರತೆಯ ಕಂಡು ಕಠೋರ ಹೃದಯದ ಯಮನ ಹೃದಯವೂ ಕರಗಿತಂತೆ. ಆಕೆ ಮನೆಯ ಮುಂದೆ ಹಾಕಿದ್ದ ಆ ರಂಗೋಲಿ ಯಮನನ್ನೂ ಆಕರ್ಷಿಸಿತ್ತಂತೆ. ಆಕೆ ಹಾಕಿದ್ದ ಆ ರಂಗೋಲಿಯನ್ನು ಕಂಡು ಪ್ರಸನ್ನನಾದ ಯಮದೇವ, ಆಕೆಯಲ್ಲಿ ನಾನು ನಿನ್ನ ಪತಿಯ ಪ್ರಾಣ ಕೊಂಡೊಯ್ಯಲೆಂದೇ ಬಂದಿದ್ದೆ. ನಿನ್ನ ಈ ಸುಂದರ ರಂಗೋಲಿಗೆ ನಾನು ಆಕರ್ಷಿತನಾಗಿದ್ದೇನೆ. ಇನ್ನು ಮುಂದೆ ಸೂರ್ಯೋದಯಕ್ಕೆ ಮೊದಲೇ ಎದ್ದು ಮನೆಯ ಮುಂದೆ ರಂಗೋಲಿ ಹಾಕುವ ಮನೆಯನ್ನು ನಾನು ಪ್ರವೇಶಿಸುವುದಿಲ್ಲ ಎಂದು ಆಕೆಗೆ ವರ ಇತ್ತನಂತೆ. ಅದಕ್ಕೇ ಅಂದಿನಿಂದ ಇಂದಿನವರೆಗೆ ಭಾರತ ನಾರಿಯರು ಸೂರ್ಯೋದಯಕ್ಕೆ ಮೊದಲೇ ಎದ್ದು, ಮನೆಯ ಮುಂದೆ ರಂಗೋಲಿ ಹಾಕುತ್ತಾರೆ ಅನ್ನುವ ಮಾತೂ ಕೂಡಾ ಇದೆ.

ಇನ್ನು ವೈಜ್ಞಾನಿಕವಾಗಿ ಯೋಚಿಸಿದಾಗ ಮುಂಜಾನೆಯ ನಿಷ್ಕಲ್ಮಶ ವಾತಾವರಣದಲ್ಲಿ - ಶುಭ್ರವಾದ ಗಾಳಿಯನ್ನು ಸೇವಿಸುತ್ತಾ, ದೇಹವನ್ನು ಬಾಗಿಸಿ ಮಾಡುವ ಈ ಕೆಲಸ ಒಂದು ಉತ್ತಮ ವ್ಯಾಯಾಮವೇ ಸರಿ. ಅದಕ್ಕಿಂತಲೂ ಮಿಗಿಲಾಗಿ ರಂಗೋಲಿ ಮನೆಯ ಮುಂದಿನ ಅಲಂಕಾರವೂ ಹೌದು. ಮನೆಗೆ ಬರುವ ಪ್ರತಿಯೊಬ್ಬ ಅತಿಥಿಯನ್ನು ಹಿರಿಯರು-ಕಿರಿಯರು ಎನ್ನದೆ ಆದರದಿಂದ ನಗುನಗುತ್ತಾ ಸ್ವಾಗತಿಸುವುದರ ಸಂಕೇತ ರಂಗೋಲಿ ಎಂದರೆ ತಪ್ಪಿಲ್ಲ. ಅದೂ ಅಲ್ಲದೆ ಬೆಳಗ್ಗಿನ ಸಮಯದಲ್ಲಿ ಸಗಣಿಯನ್ನು ಸಾರಿಸಿದಾಗ ರೋಗಕಾರಕ ಕ್ರಿಮಿಗಳನ್ನು ನಾಶಗೊಳಿಸುವ ನಿಟ್ಟಿನಲ್ಲಿ ಕಲವು ರಾಜ್ಯಗಳಲ್ಲಿ ಈ ರಂಗೋಲಿ ಇಡುವ ಶಾಸ್ತ್ರ ಕಡ್ಡಾಯವಾಗಿದೆ, ಹಬ್ಬ ಹರಿದಿನಗಳಲ್ಲಿ, ಪೂಜೆ ಹವನಗಳಲ್ಲಿ ಸಭೆ ಸಮಾರಂಭಗಳಲ್ಲಿ ಹೀಗೆ ಇಂದಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ನಾವು ರಂಗವಲ್ಲಿಯನ್ನು ಕಾಣುವಂತಾಗಿರುವುದು ನಿಜವಾಗಿಯು ನಮಗೆ ಹೆಮ್ಮೆಯ ವಿಷಯ. ಏಕೆಂದರೆ ಅದೆಷ್ಟೋ ಶ್ರೇಷ್ಟ ಸಂಸ್ಕೃತಿಗಳು ಮೂಲೆ ಗುಂಪಾಗಿರುವ ಈ ಕಾಲದಲ್ಲಿ ರಂಗವಲ್ಲಿಯಂತಹ ವಿಶಿಷ್ಟ ಆಕರ್ಷಣೀಯ ಸಂಸ್ಕೃತಿ ನಮ್ಮಲ್ಲೇ ಉಳಿದುಕೊಂಡಿದೆ. ಆದರೆ ಇದರ ಉಳಿವು ಎಲ್ಲಿಯವರೆಗೆ ಇರಬಹುದು ಎಂದು ಊಹಿಸಲು ಅಸಾಧ್ಯ.

ಬುದ್ದಿಜೀವಿಗಳಾದ ನಾವು ನಮ್ಮ ಸಂಸ್ಕೃತಿಗಳಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದ ಈ ರಂಗವಲ್ಲಿಯನ್ನು ಉಳಿಸುವತ್ತ ಮನ ಮಾಡೋಣ ಈ ವರುಷದ ದೀಪಾವಳಿಯು ನಿಮ್ಮ ಮನೆ-ಮನದಲ್ಲಿ ರಂಗವಲ್ಲಿಯಂತೆ ಶುಭ್ರತೆಯನ್ನು ಹೊತ್ತು ತರಲಿ, ರಂಗವಲ್ಲಿ ಹೇಗೆ ಎಲ್ಲಾ ಬಣ್ಣಗಳನ್ನು ಹೊಂದಿದಾಗ ಅತೀ ಎಂದು ಅನ್ನಿಸುವದಿಲ್ಲವೋ ಅದೇ ರೀತಿ ನಮ್ಮ ಜೀವನದಲ್ಲಿ ಬರುವ ಅಹಿತ ವಿಷಯಗಳ ಬಗ್ಗೆ ಗಾಢವಾಗಿ .ಯೋಚಿಸದೆ ಹಿತವಾಗಿ ಹಂಚಿಕೊಂಡು ಬಾಳೋಣ...

ಪ್ರತಿಸ್ಪಂದನಗಳು

Re: ಮನಸ್ಸಿಗೆ ಕಚಗುಳಿ ಇಡುವ ರಂಗವಲ್ಲಿ ಚಿತ್ತಾರ
Ree Spoorthy.......enri nim addresse illa............r u Ok........
ಹಕ್ಕು ನಿರಾಕರಣೆ