Welcome, Guest   [ Register | Sign In | Take a tour | Adult Filter: On ]

ನಾವೇಕೆ ಭಾಷಾಂಧರಾಗುತ್ತಿದ್ದೇವೆ...

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ

ಹೌದು! ವರುಷಕ್ಕೆ ಒಂದು ಬಾರಿ ಬರುವ ನವೆಂಬರ್ ತಿಂಗಳು ಬಂತೆಂದರೆ ಸಾಕು, ಪ್ರತಿಯೊಬ್ಬ ಕನ್ನಡಿಗನ ಕಿವಿಗೂ ಈ ಹಾಡಿನ ಇಂಪು ಪ್ರತಿಧ್ವನಿಸುತ್ತದೆ. ಅಷ್ಟು ಜೀವಂತಿಕೆಯನ್ನು ಈ ಹಾಡು ಉಳಿಸಿಕೊಂಡಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ.

ಭರತ ಭೂಮಿಯಲ್ಲಿ ವಿವಿಧ ಭಾಷೆಗಳನ್ನು ಹೊತ್ತ ರಾಜ್ಯಗಳಲ್ಲಿ ನಮ್ಮ ಈ ಚೆಲುವ ಕನ್ನಡ ನಾಡೂ ಕೂಡಾ ಒಂದು. ಕನ್ನಡ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಕಂದನೂ ಕೂಡಾ ನಾನು "ಕನ್ನಡದ ಕಂದ" ಎಂದು ಹೃದಯಪೂರ್ವಕವಾಗಿ ಹೇಳುತ್ತಿದ್ದ ನಾಡು ನಮ್ಮದು ಅಷ್ಟೇ ಅಲ್ಲ ಕನ್ನಡ ತಾಯಿಯ ಹೆಮ್ಮೆಯ ಪುತ್ರ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತಹ ನಾಡು ನಮ್ಮ ಈ ಶಿಲ್ಪ ಕಲೆಗಳ ಬೀಡು. ಸಂಗೀತ, ಸಾಹಿತ್ಯ, ನಾಟಕ, ನೃತ್ಯ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಕೂಡಾ ಕನ್ನಡಿಗರ ಕೊಡುಗೆ ಅಪಾರ ಎಂದರೆ ಅದು ತಪ್ಪಲ್ಲ. ಅಷ್ಟು ಸಂಪದ್ಬರಿತ ಸಂಸ್ಕತಿಗಳ ನೆಲೆ ಬೀಡು ಈ ಕನ್ನಡಾಂಬೆಯ ನಾಡು. ಅದಕ್ಕಾಗಿಯೇ ಬಹಷಃ ಮೇರುನಟ ಅಣ್ಣಾವ್ರು ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನೆ ಮೆಟ್ಟಬೇಕು ಎಂದು ಹಾಡಿ ಕುಣಿವ ಮೂಲಕ ನಮಗೆಲ್ಲ ಸಂದೇಶ ಸಾರಿದ್ದು.

ಆದರೆ ಇಷ್ಟೆಲ್ಲಾ ಬೀಗಿಕೊಳ್ಳುವ ಹಂತದಲ್ಲಿರುವಾಗಲೇ ಅದೇಕೊ ಮನಸ್ಸು ಕೊಂಚ ದುಃಖತಪ್ತ ವಾತಾವರಣವನ್ನೇ ನಿರ್ಮಿಸಿತು. ಒಂದು ಕ್ಷಣ ಮನಸ್ಸು ಹಿಂದೆ ಸರಿದಿದ್ದರೂ ಮತ್ತೊಮ್ಮೆ ವಾಸ್ತವ ಜಗತ್ತಿನತ್ತ ನನ್ನನ್ನು ಕರೆತಂದಿತು. ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸರಂತಹ ಶ್ರೇಷ್ಟ ಕವಿಗಳು ಜನಿಸಿದಂತಹ ಈ ನಾಡಲ್ಲಿ ಇಂದು ಅಂತಹ ಪುಷ್ಟಿ ನೀಡಬಲ್ಲ ಕವಿಗಳು ನಮ್ಮಲ್ಲಿಲ್ಲ. ಪೂರ್ವಜರು ಕಟ್ಟಿ ಬೆಳೆಸಿದಂತಹ ಶಿಲ್ಪಕಲೆಗಳು ಪಾಳು ಬಿದ್ದರೂ ಅದರ ಸಂರಕ್ಷಣೆಯನ್ನು ಮಾಡುವವರು ನಮ್ಮಲ್ಲಿಲ್ಲ. ಕನ್ನಡ ಮಾತೆಗಾಗಿ, ಕನ್ನಡ ಭಾಷೆಗಾಗಿ ಪ್ರಾಣ ಅರ್ಪಿಸಿ ಹೋದ ವೀರರನ್ನು ನಾವಿಂದು ನೆನಪಿಸುವ ಮನಸ್ಥಿತಿಯನ್ನು ಹೊಂದಿಲ್ಲ.

ಅಂದು ನಮ್ಮ ಹಿರಿಯರಲ್ಲಿ ಇದ್ದ ಆ ಭಾಷಾ ಪ್ರೇಮ, ತಾಯಿಯ ಮಮತೆ ನಮ್ಮ ಪರಂಪರೆಯಲ್ಲಿ ಏಕೆ ಏರುಪೇರಾದಂತಾಗಿದೆ. ನಾವ್ಯಾಕೆ ಭಾಷಾಂಧರಾಗುತ್ತಿದ್ದೇವೆ. ನಮಗ್ಯಾಕೆ ಉಳಿದ ರಾಜ್ಯದ ಭಾಷಾಭಿಮಾನಿಗಳ ಹಾಗೆ ನಮ್ಮ ಮಾತೃ ಭಾಷೆ ಬಗ್ಗೆ ವ್ಯಾಮೋಹ ಇಲ್ಲದಾಗಿದೆ. ನಾವ್ಯಾಕೆ ನಮ್ಮ ಭಾಷೆಯನ್ನು ನಾವೇ ತಿರಸ್ಕಾರದಿಂದ ನೋಡುತ್ತೇವೆ. ನಮ್ಮ ತನವನ್ನು ನಾವೇ ಏಕೆ ಹಾಳುಗೆಡಹುತ್ತಿದ್ದೇವೆ. ನಮ್ಮ ಹಿರಿಯರಿಗಿಂತಿಲೂ ದೊಡ್ಡ ಸಾಧನೆಯನ್ನು ಮಾಡುತ್ತಿರುವಂತೆ ನಾವಿಂದು ವರ್ತಿಸುತ್ತಿದ್ದೇವೆ. ಇರಬಹುದು, ರಾಷ್ಟ ಮಟ್ಟದಲ್ಲಿ-ಅಂತರಾಷ್ಟ್ರ ಮಟ್ಟದಲ್ಲಿ ನಮ್ಮ ಸಾಧನೆ ಶ್ಲಾಘನೀಯವೇ ಹಾಗೆಂದ ಮಾತ್ರಕ್ಕೆ ನಾವೇನು ದೇವತಾ ಮನುಷ್ಯರಾದಂತೆಯೇ?. ನಮ್ಮ ನೆಲದ ಬಗ್ಗೆ ಗೌರವವನ್ನು ತೋರುವಲ್ಲಿ ನಮಗೆ ಸ್ವಾಭಿಮಾನ, ಪ್ರತಿಷ್ಟೆಯ ಮುಖ ಕಾಣುತ್ತಿದೆಯಲ್ಲವೇ?

ಅದೇ, ನಮ್ಮ ಪಕ್ಕದ ಮನೆಯಂತಿರುವ ಕೇರಳಕ್ಕೊ, ತಮಿಳುನಾಡಿಗೋ ಒಮ್ಮೆ ಭೇಟಿ ನೀಡಿ, ಮೊದಲ ಭೇಟಿಯೇ ಭಾಷಾಭಿಮಾನ ಎಂದರೇನು ಎಂದು ತಿಳಿದಕೊಳ್ಳವ ಹಾಗೆ ಮಾಡುತ್ತದೆ. ಅಲ್ಲಿರುವ ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಲಿ ಅಥವಾ ಎಷ್ಟೇ ಸುಶಿಕ್ಷಿತನಾಗಿರಲಿ ಜನಸಾಮಾನ್ಯರ ಜೊತೆ ಅಥವಾ ತನ್ನ ಮಾತೃ ಭಾಷೆಯಲ್ಲೇ ಮಾತನಾಡುತ್ತಾನೆ. ಆದರೆ ನಾವುಗಳೋ ಬದುಕಿಗೊಂದು ಕೆಲಸ, ಹೆಸರಿನ ಪಕ್ಕ ಶಿಕ್ಷಣದ ಪ್ರಮಾಣಿತ ಅಡ್ಡಹೆಸರು ಬಂದರೆ ಸಾಕು ತಕ್ಷಣವೇ ನಮಗೆ ಕನ್ನಡವೇ ಮರೆತುಹೋಗಿ ಆಂಗ್ಲ ಭಾಷೆಯು ನಮ್ಮ ನಾಲಗೆಯಲ್ಲಿ ಲೊಚಗುಟ್ಟುತ್ತದೆ. ಅಪ್ಪಿ ತಪ್ಪಿ ಕನ್ನಡ ಮಾತನಾಡಿದರೂ ಎಲ್ಲಿ ನನ್ನ ಮರಿಯಾದೆಗೆ ಧಕ್ಕೆ ಬರುವುದೋ ಎನ್ನುವಂತೆ ಪರದಾಡುತ್ತೇವೆ.

ನಮ್ಮ ರಾಜಧಾನಿ ಬೆಂಗಳೂರತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ, ನಮ್ಮವರಲ್ಲಿ ಎಷ್ಟು ಮಂದಿ ಕನ್ನಡವನ್ನು ಮಾತನಾಡ ಬಲ್ಲರು? ಎಷ್ಟು ಮಂದಿ ಕನ್ನಡ ಓದಬಲ್ಲರು, ಕನ್ನಡ ಬರೆಯಬಲ್ಲರು? ಕನ್ನಡ ನಾಡಲ್ಲೇ ಇದ್ದು ಕನ್ನಡ ಭಾಷೆಯ ಜ್ಞಾನವೇ ನಮಗೆ ಇಲ್ಲ ಎಂದರೆ ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆ ಇದೆಯೇ? ಒಂದು ವೇಳೆ ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ, ಹಿಂದೆ ನಮ್ಮ ಹಿರಿಯರು "ಕನ್ನಡ" ಅನ್ನು ವ ಭಾಷೆಯನ್ನು ಬಳಸುತ್ತಿದ್ದರಂತೆ ಎನ್ನುವ ಕಾಲ ನಮ್ಮ ಕರ್ನಾಟಕಕ್ಕೆ ಬರಬಹುದು ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಅಷ್ಟೇ ಅಲ್ಲದೆ, ಅಲ್ಲಿ ಇಲ್ಲಿ ಹುಟ್ಟಿಕೊಂಡಿರುವ ಕನ್ನಡ ಪರ ಸಂಘಟನೆಗಳು ಕನ್ನಡದ ಉಳಿಕೆಗಾಗಿ ಎಷ್ಟು ಶ್ರಮಿಸಿದೆ ಎಂದು ವಿಮರ್ಶಿಸಬೇಕಾಗಿದೆ. ಕನ್ನಡ ಕನ್ನಡ ಎಂದು ಬೊಬ್ಬಿಡುವ ಜನರಲ್ಲಿ ಎಷ್ಟು ಜನ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯದಲ್ಲಿ ವಿಧ್ಯಾಭ್ಯಾಸ ನೀಡಲು ಮನ ಮಾಡಿದ್ದಾರೆ ಅನ್ನುವುದು ಯೋಚಿಸಬೇಕಾದ ವಿಚಾರ. ತಮ್ಮ ವೇದಾಂತವನ್ನು ಇತರರಿಗೆ ಸಭೆ, ಭಾಷಣ, ಹೋರಾಟ ಎನ್ನುವ ಮೂಲಕ ಸಾರದೆ ತಾನೇ ಮೊದಲು ಅನುಸರಿಸಿ ಇತರರಿಗೆ ಮಾದರಿಯಾಗುವುದರಲ್ಲಿ ಹೆಚ್ಚು ಬೆಲೆಯಿದೆಯಲ್ಲವೇ? ಈ ವರುಷ ಕನ್ನಡ ತಾಯಿಯ ಮಕ್ಕಳಾದ ನಮಗೆ ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನ ಸಿಕ್ಕಿರುವದು ನಿಜವಾಗಲೂ ಜೇನು ಸವಿದಷ್ಟು ಸಂಭ್ರಮವಲ್ಲವೇ?

ಕನ್ನಡ ಭಾಷೆಯನ್ನು ಉಳಿಸುವಲ್ಲಿ ನಾವೆಲ್ಲ ಒಗ್ಗಟ್ಟಾಗೋಣ. ನಮ್ಮವರಿಗೆ ನಾವೇ ಕನ್ನಡವನ್ನು ಭೋದಿಸುವಲ್ಲಿ ಲಜ್ಜೆ ಬಿಟ್ಟು ಒಂದಾಗೋಣ. ಮುಂದೊಂದು ದಿನ ನೆರೆಯ ರಾಜ್ಯದ ಭಾಷಾಭಿಮಾನಿಗಳ ಮುಂದೆ ನಿಂತು ನಾವು ಕನ್ನಡಾಂಬೆಯ ಮುದ್ದಿನ ಕಣ್ಮಣಿಗಳೆಂದು ತಲೆ ಎತ್ತಿ ಹೇಳೋಣ ಎನ್ನುತ್ತಾ, ಕೊನೆಯದಾಗಿ ನಮ್ಮ ನಾಡಿನ ನೆಚ್ಚಿನ ಕವಿ ನಿಸಾರ್ ಅಹಮದ್ ಹೇಳಿದ ಈ ಸಾಲು ನಮಗೆ ಸ್ಪೂರ್ತಿಯಾಗಲಿ....

ಹಚ್ಚೇವು ಕನ್ನಡದ ದೀಪ...
ಕರುನಾಡ ದೀಪ...
ಸಿರಿನುಡಿಯ ದೀಪ...
ಒಲವೆತ್ತಿ ತೋರುವ ದೀಪ...
ಹಚ್ಚೇವು ಕನ್ನಡದ ದೀಪ......
ಹಕ್ಕು ನಿರಾಕರಣೆ