ಕಾಲೇಜು ಜೀವನದಲ್ಲಿ ನನ್ನ ಮತ್ತು ಆಕೆಯ ನಡುವಿನ ಸಂಪರ್ಕ ಅಷ್ಟೇನು ಮಹತ್ವದ್ದಾಗಿರದಿದ್ದರೂ ನನ್ನ ಉದ್ಯೋಗ ಜೀವನದಲ್ಲಿ ಆಕೆಯೊಂದಿಗಿನ ನನ್ನ ಒಡನಾಟ ಮರೆಯಲಸಾಧ್ಯ. ಸೀಮಿತ ದಿನಗಳ ಕಾಲದ ನಮ್ಮ ಒಡನಾಟವಾದರೂ ಮಹತ್ವಕಾಂಕ್ಷೆಗಳ ವಿಚಾರ, ಒಮ್ಮೊಮ್ಮೆ ಹಾಗೆ ಗಂಭೀರ, ಮತ್ತೊಮ್ಮೆ ಮುನಿಸು, ಒಂದಿಷ್ಟು ಕುಚೇಷ್ಟೇ, ಪ್ರೀತಿ, ವಿರಸದಲ್ಲಿ ಒಬ್ಬರಿಗೊಬ್ಬರ ಸಾಂತ್ವಾನ, ದುಃಖ ಮಿತಿ ಮೀರಿದರೆ ಕಣ್ಣಂಚಲ್ಲಿ ಕಣ್ಣೀರಿನ ಭೋರ್ಗರೆತ, ಒಟ್ಟಿನಲ್ಲಿ ಆಕೆ ತೀರ ಮುಗ್ಧ ಹುಡುಗಿ.
ಆಕೆಯ ಕೆಲವೇ ಕೆಲವು ಸೀಮಿತ ಸ್ನೇಹಿತೆಯರ ಪಟ್ಟಿಯಲ್ಲಿ ನಾನೂ ಕೂಡಾ ಓರ್ವಳು ಎಂದು ಎಷ್ಟೋ ಭಾರಿ ಹೇಳುತ್ತಿದ್ದಳು. ಆಕೆ ಇಪ್ಪತ್ತರ ಹರೆಯದರಲ್ಲಿ ಇದ್ದರೂ ಆಕೆಯದು ಎಳೆ ಕಂದನ ಮನಸ್ಸು. ನನ್ನದೋ ಸಿಡುಕು ಮೂತಿ, ಸದಾ ವಟವಟ ಅನ್ನುತ್ತಲೇ ರೇಗಾಡುತ್ತೇನೆ. ಅದೇ ಮನಸ್ಥಿತಿಯಲ್ಲಿ ನಾನಾಕೆಯನ್ನು ಒಂದು ಚೂರು ಗದರಿದೆನೆಂದಾದರೂ ಆಕೆ ಅತ್ತೇ ಬಿಡುತ್ತಾಳೆ. ನನ್ನನ್ನೇ ದಿಟ್ಟಿಸಿ ನೋಡುತ್ತಾಳೆ. ಆಕೆಯ ಆ ನೋಟವೇ ನನ್ನನ್ನು ಕ್ಷಮಿಸಿ ಬಿಡೇ...ಪ್ಲೀಸ್.... ಎಂದು ಹೇಳುವ ಹಾಗೆ ಮಾಡಿಸುತ್ತಿತ್ತು.
ಗೊತ್ತು ಗುರಿಯಿಲ್ಲದ ಜೀವನದಲ್ಲಿ ಪರರಾಜ್ಯದ ಅಪರಿಚತ ಜನರೊಂದಿಗೆ ಸುಮಾರು 4 ತಿಂಗಳುಗಳ ಕಾಲದ ಒಡನಾಟ ನಮ್ಮದು. ಬಹುಶಃ ಜಾಸ್ತಿ ಮುಂದುವರಿಸಲು ದೇವರಿಗೂ ಇಷ್ಟವಿರಲಿಲ್ಲವೋ ಏನೋ, ಆಕೆ ನನ್ನನ್ನು ಅಗಲಲೇ ಬೇಕಾಯ್ತು, ಜೊತೆಯಾಗಿಯೇ ಬಂದೆವು, ಆದರೆ ಈಗ ನನ್ನನ್ನು ಒಂಟಿಯನ್ನಾಗಿಸಿ ಆಕೆ ನೆರೆರಾಜ್ಯಕ್ಕೆ ಹೋಗಿಯೇ ಬಿಟ್ಟಳು. ಹುಟ್ಟಿದ್ದು ಕೇರಳದಲ್ಲಿ, ಓದಿದ್ದು ಕರ್ನಾಟಕದಲ್ಲಿ, ಮೊದಲ ಉದ್ಯೋಗ ಪಡೆದದ್ದು ಚೆನೈನಲ್ಲಿ, ಎಂದು ಒಮ್ಮೊಮ್ಮೆ ನನ್ನಲ್ಲಿ ಗೇಲಿ ಮಾಡುತ್ತಿದ್ದಳು. ಸದ್ಯ ನನ್ನ ಗೆಳತಿ ಬೆಂಗಳೂರೆಂಬ ಐಟಿ ಸಿಟಿಯಲ್ಲಿ ಉದ್ಯೋಗದಲ್ಲಿದ್ದಾಳೆ. ಭೌತಿಕವಾಗಿ ಆಕೆ ಈಗ ನನ್ನೊಂದಿಗೆ ಇರದೇ ಇರಬಹುದು. ಆದರೆ ಮಾನಸಿಕವಾಗಿ ಆಕೆ ನನ್ನ ಹೃದಯದಲ್ಲಿ ಬೆಚ್ಚಗಿನ ನೆನಪುಗಳನ್ನು ಇರಿಸಿ ಅದರೊಂದಿಗೆ ಕಚಗುಳಿ ಇಡುತ್ತಿದ್ದಾಳೆ.
ಹಾ!!! ಅವಳೊಂದಿಗೆ ಕಳೆದ ದಿನಗಳಲ್ಲಿ ಆ ಒಂದು ದಿನ ನಡೆದ ಘಟನೆ ನನಗಿನ್ನು ಸರಿ ನೆನಪಿದೆ, ಆಕೆ ಬೆಂಗಳೂರಿಗೆ ಹೋಗಲು ಕೇವಲ ಒಂದು ವಾರಗಳ ಅಂತರವಷ್ಟೇ ಇತ್ತು. ಹೋಗೋ ಮುಂಚೆ ಮರೀನಾ ಬೀಚ್ ನೋಡ್ಬೇಕು ಅನ್ನೋ ಆಸೆ ಕಣೇ ಅಂತ ಅಂದ್ಲು. ಸರಿ ಗೆಳತಿ ಹೋಗೋಣ ಅಂದೆ. ಅಂದು ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರ. ಬೆಳಗ್ಗೆ ಇಡೀ ನಾನು ಮತ್ತು ಆಕೆ ಚೆನ್ನೈನ ಟಿ.ನಗರ ಸುತ್ತಾಡಿ, ಮಧ್ಯಾಹ್ನ ಹಾಸ್ಟೇಲಿನಲ್ಲಿ ಊಟ ಮುಗಿಸಿ, ಸ್ನೇಹಿತರ ಜೊತೆ ಬೀಚ್‍ಗೆ ಹೋಗೋಕೆ ಅಂತ ಕೋಡಂಬಾಕಮ್ ರೈಲ್ವೇ ಸ್ಟೇಷನ್‌ಗೆ ಬಂದೆವು. ಛತ್ರಿಯನ್ನು ಕೂಡಾ ತಂದಿರದೇ ಇದ್ದಾಗ ಆ ವರುಣನಿಗೆ ಅದೇನು ಮುನಿಸೋ ಗೊತ್ತಿಲ್ಲ ಒಮ್ಮೆಲೆ ಆತ ತನ್ನ ಆರ್ಭಟವನ್ನು ತೋರಿದ. ಇದರೊಂದಿಗೆ ನನ್ನದೇನು ಮುನಿಸೋ ಗೊತ್ತಿಲ್ಲ, ಒಂದೇ ಸವನೆ ಮಾತು ಮಾತಿಗೂ ರೇಗುತ್ತಲೇ ಇದ್ದೆ. ಅಂತೂ ಇಂತೂ ರೈಲ್ವೇ ಸ್ಟೇಷನ್ ತಲುಪಿದೆವು.
ಅಲ್ಲಿ ಹೋಗಿ ನೋಡಿದ್ರೆ ನನ್ನ ಪ್ಯಾಂಟ್ ಪೂರ್ತಿ ಮರಳು-ಮಣ್ಣಿನಿಂದ ತೋಯ್ದಿತ್ತು. ಅಲ್ಲೂ ನಾನು ಸುಮ್ಮನಿರಲಿಲ್ಲ ಮುಖವನ್ನು ದೂರ್ವಾಸ ಮುನಿಗಳ ಮುಖದಂತೆ ಮಾಡಿಕೊಂಡು ಕುಳಿತ್ತಿದ್ದೆ. ನನ್ನ ಉಳಿದ ಸ್ನೇಹಿತರೆಲ್ಲ ಬಂದು ಮಾತನಾಡಿಸಿದರೂ ಮಾತಿಗೆ ತಕ್ಕ ಉತ್ತರವನ್ನಷ್ಟೇ ನೀಡಿದೆ. ಇದನ್ನೆಲ್ಲ ಗಮನಿಸಿದ ಆ ನನ್ನ ಮುದ್ದಿನ ಗೆಳತಿ, " ಪ್ಲೀಸ್ ಇವತ್ತು ಒಂದು ದಿನ ಆದ್ರೂ ಕೋಪ ಕಡಿಮೆ ಮಾಡ್ಕೋ, ಎಷ್ಟು ದಿನಾಂತ ಹೀಗೆ ರೇಗಾಡ್ತೀಯಾ ನಾನು ಇನ್ನು ನಿನ್ನ ಜೊತೆ ಇರೋದು ಕೇವಲ ಬೆರಳೆಣಿಕೆಯಷ್ಟು ದಿನ ಮಾತ್ರ ಕಣೇ, ಇವತ್ತಾದ್ರೂ ಖುಷಿ ಪಟ್ಕೊಂಡು ಇರ್ಬಾರ್ದಾ?" ಅಂತ ಅಂದ್ಲು. ಹೇಳಿದ್ದು ಅಷ್ಟೇ ಆದರೂ ಆಕೆಯ ಮಾತು ನನ್ನ ಪಾಲಿಗೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದರೆ ಹೇಗಾಗುತ್ತದೋ ಹಾಗಾಯಿತು. ಸಿಟ್ಟಿನಿಂದ ಆಕೆಯನ್ನೇ ದುರುಗುಟ್ಟಿ, " ಹೌದು, ನನ್ನಿಂದಾಗಿ ನಿನ್ನ ಇವತ್ತಿನ ಖುಷಿ ಹಾಳಾಗೋದು ಬೇಡ. ನೀನು ನಿನ್ನ ಉಳಿದ ಸ್ನೇಹಿತರ ಜೊತೆ ಹೋಗು ನಾನು ಬರಲ್ಲ" ಅಂತ ಹೇಳಿ ಮುಂದಿನದರ ಪರಿವೆಯೇ ಇಲ್ಲದೆ ಒಂದೇ ಸವನೆ ಅಲ್ಲಿಂದ ಕಾಲ್ಕಿತ್ತು ನೇರ ಹಾಸ್ಟೇಲ್ ಕಡೆ ಮುಖ ಮಾಡಿದೆ. ಸ್ವಲ್ಪ ದೂರದವರೆಗೂ ನನ್ನ ಹೆಸರು ಕೂಗಿ ಕರೆಯುತ್ತಿದ್ದ ಧ್ವನಿ ಕೇಳುತ್ತಿತ್ತು. ಆದರೆ ನಾನು ಮಾತ್ರ ಹಿಂತಿರುಗಿ ನೋಡಲೇ ಇಲ್ಲ.
ಮುಂಗೋಪದಿಂದ ಹಾಗೆ ಮಾಡಿ ಬಂದರೂ ರೂಮ್‌ನಲ್ಲಿ ಕುಳಿತು ಒಂದೇ ಸವನೆ ಅಳ ತೊಡಗಿದೆ. ರಾತ್ರಿಯಾಯಿತು ನಾನು ಊಟ ಮಾಡದೆ ಅವಳಿಗಾಗಿ ಕಾಯುತ್ತಾ ಕೂತೆ, ರಾತ್ರಿ ಸುಮಾರು ಒಂಭತ್ತರ ಸಮಯಕ್ಕೆ ಆಕೆ ಬಂದಳು ನನ್ನ ಕಡೆ ನೋಡಲೇ ಇಲ್ಲ ತಟ್ಟೆಯನ್ನು ಹಿಡಿದುಕೊಂಡವಳೇ ನೇರ ಅಡುಗೆ ಮನೆಗೆ ಹೋಗಿ ಟೇರೀಸ್‌ನಲ್ಲೇ ಊಟ ಮಾಡಿ ಬಂದು ಮಲಗಿದಳು. ನಾನೂ ಹಸಿದ ಹೊಟ್ಟೆಯಲ್ಲೇ ಹಾಗೆ ಮಲಗಿದೆ. ಅದೇನು ಆಶ್ಚರ್ಯವೋ ಏನೋ ಗೊತ್ತಿಲ್ಲ ಮರುದಿನ ಆಕೆ ನನ್ನೊಂದಿಗೆ ಎಂದಿನಂತೆ ಮಾತನಾಡಲಾರಂಭಿಸಿದಳು. ನಮ್ಮ ನಡುವೆ ಏನೂ ಅಹಿತಕರ ಘಟನೆ ನಡೆದಿಲ್ಲದಂತೆ ವರ್ತಿಸಿದಳು. ನನಗೆ ಮಾತ್ರ ನಾನು ಮಾಡಿದ ತಪ್ಪು ಮತ್ತೆ ಮತ್ತೆ ನನ್ನನ್ನು ಚುಚ್ಚುವಂತೆ ಮಾಡಿತು.
ಮತ್ತೆ ಪುನಃ ಅಕ್ಟೋಬರ್ 2 ಮರೀನಾ ಬೀಚ್‍ಗೆ ಹೋದೆವು. ಆ ದಿನ ಚೆನ್ನೈಯಲ್ಲಿ ನನ್ನ ಮತ್ತು ಆಕೆಯ ಕೊನೆಯ ತಿರುಗಾಟವಾಗಿತ್ತು. ಅಲೆಗಳ ಅಪ್ಪಳಿಸುವಿಕೆಯ ನಡುವೆ ಮೆಲ್ಲಗೆ ಆಕೆಗೆ ಕೇಳುವಂತೆ Sorry, ಕಣೇ ಕೃಷ್ಣಾ, ನಾನು ನಿನ್ನಲ್ಲಿ ಅಂದು ತುಂಬಾ ಕೆಟ್ಟದಾಗಿ ನಡೆದುಕೊಂಡೆ ನನ್ನನ್ನು ಕ್ಷಮಿಸಿ ಬಿಡು ಅಂದೆ ಅದಕ್ಕವಳು, ಇಲ್ಲ ಮಾರಾಯ್ತಿ ನಂಗೆ ಬೇಜಾರಿಲ್ಲ ನೀನು ಹೇಗೆ ನಿನ್ನ ಮನಸು ಹೇಗೆ ಅಂತ ನಂಗೊತ್ತು. ಯಾವಾತ್ತು ನಿನ್ನ ಖುಷಿ ಬಗ್ಗೆ ಯೋಚನೆ ಮಾಡದೆ ನಿನ್ನೊಂದಿಗೆ ಇರುವವರನ್ನು ಖುಷಿಯಾಗಿ ಇಡುವುದರ ಬಗ್ಗೆ ಯೋಚನೆ ಮಾಡು ಎಂದು ಪಿಸುಗುಟ್ಟಿದಳು.
ಇತ್ತೀಚೆಗೆ ಆಕೆಯ ಹುಟ್ಟುಹಬ್ಬವನ್ನು ನನ್ನ ಜೊತೆ ಆಚರಿಸಿಕೊಳ್ಳಲೆಂದು ಮತ್ತೆ ಚೆನ್ನೈಗೆ ಬಂದಳು. ಮತ್ತೊಮ್ಮೆ ನಾನು ಆಕೆಯನ್ನು ಅದೇ ಟಿ.ನಗರಕ್ಕೆ ಹಾಗೂ ಅದೇ ಮರೀನಾಕ್ಕೆ ಕರೆದುಕೊಂಡು ಹೋದೆ. ಸಮುದ್ರ ನೀರಿನ ಮುಂದೆ ನಿಂತು ಸ್ವಾತಿ... ನಮ್ಮ ಜೀವನವೇ ಈ ಅಲೆಗಳ ಹಾಗೆ ಕಣೇ ಒಮ್ಮೊಮ್ಮೆ ಎಷ್ಟೇ ರಭಸದ ಅಲೆ ಬಂದರೂ ನಾವು ಧೃಢವಾಗಿ ನಿಂತು ಎದುರಿಸುತ್ತೇವೆ, ಆದರೆ ಇನ್ನೊಮ್ಮೊಮ್ಮೆ ಆ ರೀತಿಯಾಗಿ ಆಧಾರವಿಲ್ಲದೆ ಬೀಳುತ್ತೇವೆ ಎಂದು ಅಲೆಗಳ ರಭಸಕ್ಕೆ ಹಿಡಿತವಿಲ್ಲದೆ ಬಿದ್ದು ಏಳಲು ಪರದಾಡುತ್ತಿರುವವರ ಕಡೆ ಕೈ ತೋರಿಸಿ ಹೇಳಿದಳು.
ಆಕೆಯ ಮಾತು ಚಿಕ್ಕದಾದರು ನನ್ನ ಮನಸನ್ನದು ಈಗಲೂ ಕೊರೆಯುತ್ತಿದೆ. ಬಹುಷಃ ನೆನಪುಗಳೇ ಹೀಗೆ ಎಂದು ಅನಿಸುತ್ತದೆ. ಆಕೆ ಎಲ್ಲೇ ಇರಲಿ ಹೇಗೆ ಇರಲಿ ಮನದಲ್ಲಿ ಸದಾ ಹರುಷವನ್ನೇ ತುಂಬುತ್ತಿರಲಿ ಎಂದು ಬಯಸುವೆ.
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು