Welcome, Guest   [ Register | Sign In | Take a tour | Adult Filter: On ]

ಆ ಫೋನ್ ಕಾಲ್‌ನಿಂದ ಆದ ಅವಾಂತರ.....


ಅದೊಂದು ಶನಿವಾರ, ನನಗೆ ಯಾವುದೋ ಕಾರಣಕ್ಕೆ ಕಾಲೇಜಿಗೆ ರಜೆ ಸಾರಲಾಗಿತ್ತು. ನನ್ನ ಅಮ್ಮ ಸಂಗೀತ ಶಿಕ್ಷಕಿಯಾಗಿದ್ದ ಕಾರಣ ಶನಿವಾರದ ದಿನ ಅವರು ನೆಲ್ಯಾಡಿಯಲ್ಲಿ ಸಂಗೀತ ತರಗತಿ ನಡೆಸುತ್ತಿದ್ದರು. ಎಂದಿನಂತೆ ಅಮ್ಮ ಮಧ್ಯಾಹ್ನದ ವೇಳೆ ಹೊರಟು ಹೋದರು, ನಂತರ ನಾನು ಮತ್ತು ಅಪ್ಪ ಮಾತ್ರ ಮನೆಯಲ್ಲಿ ಇದ್ದೆವು

ಸುಮಾರು 3.00 ಗಂಟೆಯ ಹೊತ್ತಿಗೆ ಮನೆಯ ಫೋನ್ ರಿಂಗಾಯಿತು ನಾನು ರಿಸೀವ್ ಮಾಡಿದಾಗ ಆ ಕಡೆಯಿಂದ, " ಹಲೋ, ನಾನು ಡಾ. ಮುರಳಿ ಮಾತಾಡೋದು, ನನ್ನ ಮಗನಿಗೆ ಇವತ್ತು ಸಂಗೀತ ಕ್ಲಾಸ್ ಇಲ್ವಾ ? " ಎಂದರು. ಅದಕ್ಕೆ ನಾನು "ಕ್ಲಾಸ್ ಇದೆ ಅಮ್ಮ ಮಾಮೂಲಿ ಟೈಮ್‌ಗೆ ಹೋಗಿದ್ದಾರೆ" ಅಂದೆ. ಅದಕ್ಕವರು " ಹೌದಾ ! ನಾನೀಗ ಕ್ಲಾಸ್ ಮಾಡೋ ಸ್ಥಳದಿಂದಾನೇ ಮಾತಾಡ್ತಾ ಇದ್ದೀನಿ. ಇಲ್ಲಿ ಟೀಚರ್ ಕಾಣ್ತಾ ಇಲ್ಲ, ಆದ್ರೆ 2-3 ಮಕ್ಳಿದ್ದಾರೆ ಅಂದರು. ಸರಿ ನಾನು ವಿಚಾರಿಸಿ ತಿಳಿಸುತ್ತೇನೆ ಎಂದೆ. ಅಮ್ಮ ಹೊರಟ ಲೆಕ್ಕ ಪ್ರಕಾರ 1.00 ಗಂಟೆಗಾದರು ಅಲ್ಲಿಗೆ ತಲುಪ ಬೇಕಾಗಿತ್ತು.

ಏನು ಮಾಡೋದು ? ಎಂದು ಯೋಚಿಸುತ್ತಿರುವಾಗ ಅಪ್ಪ ಯಾರ ಫೋನ್ ಮಗಾ.. ಅಂತ ಕೇಳಿದರು, ನಾನು ಹಿಂದೆ-ಮುಂದೆ ನೋಡದೆ " ಅಮ್ಮ ಕ್ಲಾಸ್ ಹತ್ರ ತಲುಪಿಲ್ಲಂತೆ ಅಪ್ಪಾ, ಡಾ. ಮುರಳಿ ಫೋನ್ ಮಾಡಿದ್ರು" ಅಂದೆ. ಅಪ್ಪಂಗೆ ಬಿ.ಪಿ. ಇದ್ದ ಕಾರಣ ಈ ವಿಷಯ ಆಘಾತಕಾರಿಯಾಯಿತು. ಮೈಯೆಲ್ಲ ಬೆವರಿ ಅಪ್ಪ ಕುಸಿದು ಬಿದ್ದರು. ಅಪ್ಪನ ಆ ಸ್ಥಿತಿ ನನ್ನನ್ನು ದಿಕ್ಕು ತೋಚದಂತೆ ಮಾಡಿತು. ಅಪ್ಪನಿಗೆ ಉಪಚರಿಸಿ, ಅಮ್ಮಂಗೆ ಏನು ಆಗಿರಲ್ಲ ಅಪ್ಪ, ದೇವ್ರು ಇದ್ದಾನೆ ನೀವು ಟೆನ್‌ಶನ್ ಮಾಡ್ಬೇಡಿ ಎಂದು ಸಂತೈಸಿಸಿ, ಮೊಬೈಲ್ ಹೊರಗಡೆ ತಗೊಂಡು ಹೋಗಿ ಚಿಕ್ಕಪ್ಪನಿಗೆ ಫೋನ್ ಮಾಡಿದೆ. ಚಿಕ್ಕಪ್ಪ, ಹಾ! ಅತ್ತಿಗೆ ಕೊಕ್ಕಡ ತನಕ ಬೈಕ್‌ನಲ್ಲೇ ಬಂದ್ರು ಅಲ್ಲಿಂದ ಜೀಪ್‌ನಲ್ಲಿ ಹೋದ್ರು ಅನ್ಸುತ್ತೆ ಅಂದ್ರು. ಸರಿ ಚಿಕ್ಕಪ್ಪ ಎಂದು ಹೇಳಿ ಫೋನ್ ಇಟ್ಟ ಕೂಡಲೇ, ಆ ಡಾಕ್ಟರ್ ಮತ್ತೊಮ್ಮೆ ಫೋನ್ ಮಾಡಿ, ಟೀಚರ್ ಇಲ್ಲಿಗೆ ಬರ್ಲೇ ಇಲ್ವಂತೆ ಇಲ್ಲಿದ್ದ 2-3 ಮಕ್ಕಳು ಮನೆಗೆ ಹೊರಟು ಹೋದರು ಎಂದು ಹೇಳಿದರು. ಸರಿ, ಅಮ್ಮ ಎಲ್ಲಿಯಾದರು ಕ್ಲಾಸಿಗೆ ಬಂದ ವಿಷಯ ನಿಮಗೆ ಗೊತ್ತಾದರೆ ದಯವಿಟ್ಟು ಫೋನ್ ಮಾಡಿ ಎಂದು ಹೇಳಿ ಫೋನ್ ಇಟ್ಟು ಬಿಟ್ಟೆ.

ಈ ಬಾರಿ ಅಪ್ಪ ಫೋನ್ ಬಗ್ಗೆ ಕೇಳಿದಾಗ "ಅಮ್ಮ ಕ್ಲಾಸ್‌‌ನಲ್ಲೇ ಇದ್ದಾರಂತೆ, ಡಾಕ್ಟರ್‌ಗೆ ಏನೋ ಕನ್‌ಫ್ಯೂಸ್ ಆಗಿತ್ತಂತೆ" ಎಂದು ಸುಳ್ಳು ಹೇಳಿದೆ. ಆದ್ರೆ ಅಪ್ಪಂಗೆ ಧೈರ್ಯಕ್ಕೋಸ್ಕರ ಹಾಗೆ ಹೇಳಿದರೂ ನಾನು ಮಾತ್ರ ಅಮ್ಮನನ್ನೇ ಮನಸಿನಲ್ಲಿಟ್ಟುಕೊಂಡು, ಅಮ್ಮನನ್ನೊಮ್ಮೆ , ಅಮ್ಮ ಪ್ರಯಾಣಿಸುವ ಆ ಅಪಘಾತ ವಲಯವನ್ನೊಮ್ಮೆ ಯೋಚಿಸುತ್ತಿರುವಾಗ ನನಗರಿವಿಲ್ಲದಂತೆಯೇ ಕಣ್ಣಲ್ಲಿ ನೀರು ತನ್ನಿಂದ ತಾನೇ ನನ್ನ ಕಾಲ ಹೆಬ್ಬೆರಳನ್ನು ಸ್ಪರ್ಶಿಸುವಾಗಲೇ ನಾನು ವಾಸ್ತವಕ್ಕೆ ಬಂದದ್ದು.

ಸಂಜೆಯಾಯಿತು, ಗಡಿಯಾರ 5.00 ಗಂಟೆಯನ್ನು ಬಾರಿಸಿತು, ಮನೆಯ ಗೇಟ್ ಒಮ್ಮೆಲೆ ಶಬ್ದಗೊಂಡಿತು, ನಾಯಿ ಬೊಗಳತೊಡಗಿತು, ಗಾಬರಿಯಿಂದ ನಿಧಾನವಾಗಿ ಮನೆ ಎದುರಿನ ಮೆಟ್ಟಿಲಿನಿಂದ ಇಳಿದು ಬಂದೆ, ದಾರಿಗೆ ಮುಖ ಮಾಡಿ ನೋಡಿದರೆ ನನ್ನ ಕಣ್ಣೆದುರಿಗೆ ಕಂಡದ್ದು "ಅಮ್ಮ". ವ್ಹಾವ್ ! ನನ್ನ ಖುಷಿಗೆ ಪಾರವೇ ಇರಲಿಲ್ಲ, ಅಮ್ಮನನ್ನು ಕಂಡೊಡನೆ, ದೂರ ಹೋಗಿದ್ದೆ ಅಮ್ಮ ಇಷ್ಟು ಹೊತ್ತು, ಕ್ಲಾಸ್ ಇರ್ಲಿಲ್ಲ ಅಂತ ಡಾಕ್ಟರ್ ಫೋನ್ ಮಾಡಿದ್ರು, ಮತ್ಯಾಕೆ ಇಷ್ಟು ಹೊತ್ತು ಆಯ್ತು ಎಂದು ಒಂದೇ ಸವನೆ ಎಡೆಬಿಡದೆ ಕೇಳಿದೆ. ಅಯ್ಯೋ ನಾನು ಕ್ಲಾಸಿನಿಂದಾನೇ ಬರ್ತಾ ಇದ್ದೇನೆ, ಇವತ್ತು ಮಾಮುಲು ಜಾಗದಲ್ಲಿ ಗಣೇಶೋತ್ಸವ ಲೆಕ್ಕದಲ್ಲಿ ಏನೋ ಕಾರ್ಯಕ್ರಮ ಇತ್ತು ಅದಕ್ಕೆ ಅಲ್ಲೇ ಬೇರೆ ಜಾಗದಲ್ಲಿ ಕ್ಲಾಸ್ ಮಾಡಿದೆ, ಡಾಕ್ಟರ್ ಮಗ 1 ತಿಂಗಳಿಂದ ಕ್ಲಾಸಿಗೆ ಬಂದಿರ್ಲಿಲ್ಲ ಹಾಗಾಗಿ ಅವರಿಗೆ ವಿಷಯ ಗೊತ್ತಿರ್ಲಿಲ್ಲ ಎಂದು ಅಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೇಳಿದಾಗ ನಾನು ಇದರಿಂದ ನಮಗಾದ ಗೊಂದಲದ ಬಗ್ಗೆ ಹೇಳಿಬಿಟ್ಟೆ.

ನಡೆದದ್ದು ಚಿಕ್ಕ ಘಟನೆಯಾದರು ಈ ಫೋನ್ ಕಾಲ್‌ನ ಆವಾಂತರದಿಂದ ನನ್ನ ಮತ್ತು ಅಪ್ಪನ ಮನಸಲ್ಲಿ ಇಡೀ ಕೋಲಾಹಲವೇ ನಡೆದು ಹೋಯಿತು. ಈಗಲೂ ಅಷ್ಟೇ ಅನಿವಾರ್ಯವಾಗಿ ಉದ್ಯೋಗದ ಸಲುವಾಗಿ ನಾನು ಮನೆ ಬಿಟ್ಟು ದೂರದ ಚೆನೈನಲ್ಲಿ ಇದ್ದರೂ ನಮ್ಮ ಮನೆಯಲ್ಲಿ ಯಾರಿಗಾದರು ಒಂದು ಚೂರು ನೋವಾದರು ಒಬ್ಬರಿಗೊಬ್ಬರು ಫೋನ್ ಮಾಡಿ ಸಮಾಧಾನ ಮಾಡಿಕೊಳ್ಳುತ್ತೇವೆ. ಸುಖ ದುಃಖಗಳನ್ನು ಹಂಚಿಕೊಳ್ಳುತ್ತೇವೆ. ಹೀಗೆಯೇ ಇನ್ನು ಮುಂದೆಯೂ ನಮ್ಮ ಮನೆಯಲ್ಲಿ ಸದಾ ಪ್ರೀತಿ ತುಂಬಿ ತುಳುಕುತ್ತಿರಲಿ ಎಂದು ಮನಪೂರ್ವಕವಾಗಿ ಆಶಿಸುತ್ತೇನೆ.

ಪ್ರತಿಸ್ಪಂದನಗಳು

Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ಪರವಾಗಿಲ್ಲ ಮೇಡಂ, ನೀವು ಸ್ವಲ್ಪ ಧೈರ್ಯಶಾಲಿ ಎನಿಸುತ್ತದೆ.ನನಗಾಗಿದ್ದರೆ ಅಪ್ಪ ನನಗೆ ಸಮಾಧಾನ ಹೇಳಬೇಕಿತ್ತು.ಆದರೆ ನೀವೇ ಅಪ್ಪನಿಗೆ ಧೈರ್ಯ ಹೇಳ್ತಿರಂದ್ರೆ! ನಾವು ಸಹ ನಿಮ್ಮ ಮನೆಯಲ್ಲಿ ಸದಾ ನಗು, ಸಹಕಾರ ಹೀಗೆ ತುಂಬಿರಲಿ ಎಂದು ಹಾರೈಸುತ್ತೇವೆ.
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ಇಂತಹ ಸಣ್ಣ ಪುಟ್ಟ ವಿಷಯಕ್ಕೆ ಗಾಬರಿಯಾಗದೆ ಧೈರ್ಯವಂತೆಯಾಗಿ ಎದುರಿಸಬೇಕು. ಯಾವಾಗಲು ಸರಿಯಾದ ಕಾರಣ ಇರದೇ ಇತರರ ಮಾತುಗಳ ಮೇಲೆ ನಂಬಿಕೆಯನ್ನು ಇಡಬಾರದು. ಅದು ಡಾಕ್ಟರ್ ಆದರೂ ಸೈ ಕಲೆಕ್ಟರ್ ಆದರೂ ಸರಿ?
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
Nice! keep it up...
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ತುಂಬಾ ಚೆನ್ನಾಗಿದೆ, ಹೀಗೆ ಮುಂದುವರಿಸಿ.
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ಹಾಯ್ ಸ್ವಾತಿ, ಆತಂಕಗಳೇ ಹಾಗೇ ಎಷ್ಟೇ ಧೈರ್ಯವಂತರನ್ನೂ ಕೂಡ ಅಧೈರ್ಯರನ್ನಾಗಿಸಿ ಬಿಡುತ್ತೆ. ತಂದೆ-ತಾಯಿಯರೆಡೆಗಿನ ಮಮಕಾರ ಲೇಖನದಲ್ಲಿ ಚೆನ್ನಾಗಿ ಮೂಡಿಬಂದಿದೆ. ಬರಹದ ಯಾತ್ರೆ ಸಾಗಲಿ.... ನಾಗೇಂದ್ರ ತ್ರಾಸಿ.
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ಸ್ವಾತಿಯವರೇ, ಇದೇ ಲೇಖನವನ್ನು ಇತ್ತೀಚೆಗೆ ನಾನು ಬೆಳ್ತಂಗಡಿಗೆ ಹೋದಾಗ ಸ್ಥಳೀಯ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕದಲ್ಲಿ ನೋಡಿದ ನೆನಪು. ಕೃತಿಚೌರ್ಯ ಅಲ್ಲ ತಾನೇ? ಅಥವಾ ಅದೇ ಲೇಖನ ಇಲ್ಲೂ ಪ್ರಕಟವಾಗಿದೆಯೇ?
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ನೀವು ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು. ಆದರೆ ನೀವು ಓದಿದ ಲೇಖನ ಬಹುಶಃ ಇದಲ್ಲ, ಅದು ನಾನೇ ಬರೆದ ಇನ್ನೊಂದು ಲೇಖನ ಮನಸ್ಸಿಗೆ ಕಚಗುಳಿ ಇಡುವ ರಂಗವಲ್ಲಿ ಚಿತ್ತಾರವಾಗಿರಬಹುದು. ಅದು ಅಲ್ಲಿ ಪ್ರಕಟವಾದ ಮೇಲೆಯೇ ನನ್ನ ಬ್ಲಾಗ್‌ನಲ್ಲಿ ಬರೆದೆ. ನನ್ನ ಲೇಖನವನ್ನೇ ನಾನು ನನ್ನ ಬ್ಲಾಗ್‌ನಲ್ಲಿ ಬರೆದೆ ಇದು ತಪ್ಪೇ ?
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ಯಾನ್ ಈರ್ ತುಂಬಾ ದೈರ್ಯವಂತೆ ಇಂದ್ ಎನ್ನಿದಿತ್ತೆ. ಈತೆನಾ ಧೈರ್ಯ ಇಪ್ಪುನಿ!! ಏನಲಾ ಆವಡ್ ನಿಗಲ್ನ ಇಲ್ಲಡೆ ಇಂಚೆನೆ ಪ್ರೀತಿ ಇಪ್ಪಡ್ ಇಂದ್ ಯಾನ್ಲಾ ಹಾರೈಸುವೆ... ತುಂಬಾ ಚೆನ್ನಾಗಿದೆ ಬರಹ. ಹೀಗೆ ಮುಂದುವರಿಸಿ...
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ಸ್ವಾತಿ ಬ್ಲಾಗ್ ನೋಡಿದೆ - ಚಿಕ್ಕ ಎಳೆಯೂ ನಿನ್ನ ಪೆನ್ನಿನಲ್ಲಿ ಲೇಖನವಾಗುತ್ತಾದೆ. ಅಬಿನ0ದನೆಗಳು. "ಸರಿ ಎ0ದು ನ0ಬಿದ್ದನ್ನು ಎ0ದಿಗೂ ಬಿಡ್ಬೇಡ. ತಪ್ಪೆ0ದು ಕ0ದು ಬ0ದರೆ ತಿದ್ದಿಲು ಹಿ0ಜರಿಕೆ ಬೇಡ." ಅದುವೇ ಜೀವನ - ಶುಭವಾಗಲಿ ಜೋಸೆಫ್ ಪಿರೇರಾ, ಕೊಕ್ಕಡ.
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
nice work. keep it up.
Re: ಆ ಫೋನ್ ಕಾಲ್‌ನಿಂದ ಆದ ಅವಾಂತರ.....
ನಿಜವಾಗಿಯೂ ನಿಮ್ಮ ಬರೆಯುವ ರೀತಿ ನನಗೆ ತುಂಬಾ ಇಷ್ಟ. ಏನೇ ವಿಚಾರ ಸಿಗಲಿ ಅದನ್ನು ಚೆನ್ನಾಗಿ ವಿವರಿಸುವ ಶಕ್ತಿ ನಿಮಗಿದೆ. ಓದುಗರಿಗೆ ಬೋರ್ ಆಗದ ರೀತಿಯಲ್ಲಿ ನೀವು ವಿವರಿಸುತ್ತೀರಿ. ನನಗ0ತು ನಿಮ್ಮ ಬ್ಲಾಗ್ ಓದಲು ತುಂಬಾ ಇಷ್ಟ. ನಿಮ್ಮಿ0ದ ಇನ್ನು ಒಳ್ಳೆಯ ಲೇಖನವನ್ನು ನಿರೀಕ್ಷ್ಹಿಸುತ್ತೇನೆ
ಹಕ್ಕು ನಿರಾಕರಣೆ