ಅದೆಲ್ಲೋ ಕಾಶ್ಮೀರದ ಗುಡ್ಡಗಾವಲಿನ ಗಡಿಗಳಲ್ಲಿ ಶಸ್ತ್ರಾಸ್ತ್ರ ಸನ್ನದ್ದತೆಯಿಂದ ಭರತಮಾತೆಯನ್ನು ಅನ್ಯರಿಗೆ ಬಿಟ್ಟು ಕೊಡಲಾರೆವು ಅನ್ನುವ ಉದ್ದೇಶದಿಂದ , ಮಳೆ-ಚಳಿ-ಬಿಸಿಲು ಯಾವುದಾದರೇನು ? ಒಂದು ವೇಳೆ ಮೃತ್ಯುವೇ ತನ್ನ ಕಣ್ಣ ಮುಂದೆ ಬಂದು ನಿಂತರೂ ಅಡ್ಡಿ ಇಲ್ಲ ಅನ್ನುವಷ್ಟರ ಮಟ್ಟಿಗೆ ಮನಸ್ಸಿನಲ್ಲಿ ಹುದುಗಿರುವ ಆತ್ಮಸ್ಥೈರ್ಯದೊಂದಿಗೆ ಎದೆಯನ್ನು ' ದಿಲ್ ' ಅನ್ನುವಂತೆ, ಧೈರ್ಯದಿಂದ ಉಬ್ಬಿಸಿ, ನಮ್ಮ ಪರಿಚಯಸ್ತರೋ, ಸ್ನೇಹಿತರೋ, ಅಥವಾ ಅಕ್ಕಪಕ್ಕದ ಮನೆಯವರೋ (ನಮ್ಮ ಮನೆಯವರು ಅಂತ ಹೇಳಿಸಿಕೊಳ್ಳುವವರ ಸಂಖ್ಯೆ ವಿರಳ ) ಸೈನಿಕ ಎಂಬ ಹಣೆಪಟ್ಟಿಯೊಂದಿಗೆ ಭಾರತೀಯ ರಕ್ಷಣಾ ಸೇನೆಗೆ ಸೇರಿಕೊಳ್ಳುತ್ತಾರೆ.
ಇತ್ತೀಚೆಗಷ್ಟೇ ಕೆಲ ತಿಂಗಳುಗಳ ಹಿಂದೆ ನಮ್ಮ ಸೇನೆಯ ಸೈನಿಕರಾಗಿದ್ದಂತಹ ಹವಾಲ್ದಾರ್ ರಮೇಶ್ ಹಾಗೂ ಕರ್ನಲ್ ವಸಂತ್ ಭೂಮಿತಾಯಿಯನ್ನು ಕಾಪಾಡಿಕೊಳ್ಳುವ ಭರದಲ್ಲಿ ನಮ್ಮ ದೇಶ ಗಡಿಭಾಗದಲ್ಲೇ ತಾಯ ರಕ್ಷಣೆಯ ಸಂಧರ್ಭದಲ್ಲಿ ತಂದೆ, ತಾಯಿ, ಮಡದಿ, ಮಕ್ಕಳನ್ನೆಲ್ಲ ಅಗಲಿ ಈ ದೇಶಕ್ಕಾಗಿ ಪ್ರಾಣತೆತ್ತರು. ವಸಂತ್ ಹಾಗೂ ರಮೇಶ್ ತಮ್ಮ ಕುಟುಂಬಕ್ಕೆ ಪ್ರೀತಿಯ ನೆನಪನ್ನು ಉಳಿಸಿ, ಮರಳಿ ಬಾರದ ಲೋಕಕ್ಕೆ ತೆರಳಿದರು.
ಜನ ಸಾಮಾನ್ಯರ ವಿಚಾರ ಹಾಗಿರಲಿ. ಆದರೆ, ಇವೆಲ್ಲದರ ಬಗ್ಗೆ ಅರಿವಿದ್ದೂ, ಅರಿವಿಲ್ಲದ್ದಂತೆ ಕುಳಿತಿದ್ದ, ನಮ್ಮ ಆಗಿನ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಈ ಬಗ್ಗೆ ತನಗೇನು ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದರು. ಇದು ಮಾಜಿ ಮುಖ್ಯಮಂತ್ರಿಗಳ ಜಾಣ ಮರೆವಿನ ಪ್ರದರ್ಶನವೋ ? ತಿಳಿಯಲು ಸಾಧ್ಯವಿಲ್ಲ. ಪಾಪ ! ಅವರಾದರು ಸುಮ್ಮನಿದ್ದರೆ ? ಅದೆಲ್ಲೋ ಬಂಧನಕ್ಕೊಳಪಟ್ಟಿದ್ದ ವೈದ್ಯ ಹನೀಫ್‌ನ ಬಂಧನದಿಂದ ಚಿಂತಿತರಾಗಿದ್ದರು. ನಮ್ಮ ಸೈನಿಕರ ಪ್ರಾಣಕ್ಕಿಂತಲೂ ಅವರಿಗೆ ಆ ಸಂದರ್ಭದಲ್ಲಿ ವೈದ್ಯ ಹನೀಫ್‌ನ " ಪ್ರೆಸ್ ಮೀಟ್ " ತುಂಬಾ ಇಂಪಾರ್ಟೆಂಟ್ ಆಗಿತ್ತೋ ಏನೋ ? ಡಾ. ಹನೀಫ್ ಮರಳಿ ಕರ್ನಾಟಕಕ್ಕೆ ಬಾರದೆ ಹೋದರೆ ಇಡೀ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗುತ್ತಿದೆಯೋ ಅನ್ನುವ ರೀತಿ ವಿಷಾದ ವ್ಯಕ್ತಪಡಿಸಿ, ಆತನ ಕುಟುಂಬಕ್ಕೆ ಸಾಂತ್ವಾನದ ನುಡಿಗಳನ್ನಾಡಿ, ಆತನ ಬಿಡುಗಡೆಗಾಗಿ ಚಡಪಡಿಸುತ್ತಿದ್ದರು.
ಇತ್ತ, ಇಡೀ ದೇಶದ ರಕ್ಷಣೆಗೆಂದು ತೆರಳಿದ ತನ್ನ ನಾಡಿನ ಈರ್ವರು ಸೈನಿಕರ ಬಗ್ಗೆ ತನಗೇನು ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದರು. ಬಹುಶಃ ಸತ್ತವರು ಹೇಗೂ ಸತ್ತರು, ಜೀವ ಇದ್ದವನನ್ನು ಉಳಿಸಿಕೊಳ್ಳುವ ಅನ್ನುವ ಮನಸ್ಥಿತಿ ಅವರದಾಗಿರುವ ಹಾಗೆ ಅನ್ನಿಸುತ್ತದೆ. ಪ್ರತಿಷ್ಟಿತ ರಾಜ್ಯದ ಮುಖ್ಯಮಂತ್ರಿಯ ಸ್ಥಿತಿಯೇ ಹೀಗಾದಾಗ ಓರ್ವ ಸಾಮಾನ್ಯ ಮನುಷ್ಯ ನಮ್ಮ ದೇಶದ ಸೈನಿಕರಿಗಾಗಲಿ, ಸೈನ್ಯಕ್ಕಾಗಲಿ, ಅಥವಾ ಪರಮ ಪೂಜ್ಯಳೆನಿಸಿದ ಭಾರತ ಮಾತೆಗೆ ಎಷ್ಟು ಗೌರವವನ್ನು ನೀಡಲು ಸಾಧ್ಯ ? ವಿದ್ಯಾವಂತರೆನಿಸಿದವರೇ ಹೀಗೆ ಮಾಡಿದರೆ ಹೇಳುವವರು, ಕೇಳುವವರು ಯಾರು ಅಲ್ಲವೇ ?
ಮಾಜಿ ಮುಖ್ಯಮಂತ್ರಿಗಳು ವೈದ್ಯ ಹನೀಫ್‌ನನ್ನು ಕಳೆದುಕೊಳ್ಳುವ ಹಂತದಲ್ಲಿದ್ದಾಗ ಅವರಲ್ಲಿ ಉಂಟಾಗಿದ್ದ ಚಡಪಡಿಕೆಗಳೆಲ್ಲ, ಕರ್ನಲ್ ವಸಂತ್ ಹಾಗೂ ಹವಾಲ್ದಾರ್ ರಮೇಶ್ ಬಗ್ಗೆ ಅಥವಾ ಅವರುಗಳ ಕುಟುಂಬದ ಬಗ್ಗೆ ತೋರಲು ಸಾಧ್ಯವಾಗಲಿಲ್ಲವೇ ? ಅಥವಾ ಇದು ಸೈನ್ಯದ ಬಗ್ಗೆ ನಮ್ಮ ಮುಖ್ಯಮಂತ್ರಿಗಳಿಗೆ ಇದ್ದ ಅನಾದರ ಭಾವನೆಯೋ ಏನೋ ? ದೇವರೇ ಬಲ್ಲ. ಒಂದು ವೇಳೆ ಮಾಜಿ ಮುಖ್ಯಮಂತ್ರಿಗಳು ಡಾ. ಹನೀಫ್‌ನ ಕುಟುಂಬಕ್ಕೆ ಬರೇ ಸಾಂತ್ವನ ನೀಡಿದ್ದರೆ ಸಾಕಾಗಿತ್ತೋ ಏನೋ, ಆದರೆ ಅವರು ಹಾಗೆ ಮಾಡದೆ, ಹನೀಫ್ ಮರಳಿ ತಾಯಿ ನಾಡಿಗೆ ಬಂದರೆ, ಆತನಿಗೆ ಇಲ್ಲೇ ಒಂದು ಉತ್ತಮ ನೌಕರಿ ನೀಡುತ್ತೇನೆ ಎನ್ನುವ ಭರವಸೆ ನೀಡಿದರು. ನೀಡಲಿ. ತಪ್ಪಲ್ಲ. ಆತ್ಮವಿಶ್ವಾಸವನ್ನು ಕಳೆದುಕೊಂಡಿರುವ ಸಂಧರ್ಭದಲ್ಲಿ ವಿಶ್ವಾಸದ ಮಾತು ಸಾಧುವೇ. ಆದರೆ ಆ ಕ್ಷಣದಲ್ಲಿ ಕರ್ನಲ್ ವಸಂತ್ ಹಾಗೂ ಹವಾಲ್ದಾರ್ ರಮೇಶ್‌ನ ಮನೆಯವರಿಗೆ ತಾನು ಸಾಂತ್ವನ ನೀಡಿ ಅವರ ಕುಟುಂಬದ ಮುಂದಿನ ಭವಿಷ್ಯಕ್ಕೆ ದಾರಿತೋರುವ ಯಾವುದೇ ಭರವಸೆಗಳ ಮಾತುಗಳು ನೀಡಬೇಕೆಂದು ಮುಖ್ಯಮಂತ್ರಿಗೆ ಅನ್ನಿಸಲೇ ಇಲ್ಲವೇ ?
ಇವೆಲ್ಲಾ ಪ್ರಶ್ನೆಗಳು ಒಂದರ ಹಿಂದೆ ಒಂದರಂತೆ ಪುಂಖಾನು ಪುಂಖವಾಗಿ ನಮ್ಮ ಮನಸ್ಸಿನಲ್ಲೇ ಮೂಡಬೇಕಷ್ಟೆ ಹೊರತು, ಪ್ರಶ್ನೆ ಮೂಡಬೇಕಾದವರ ಮನಸ್ಸಲ್ಲಿ ಮೂಡುತ್ತಿಲ್ಲ. ಸುಶಿಕ್ಷಿತರಾಗಿರುವ ರಮೇಶ್ ಹಾಗು ವಸಂತ್, ತಮ್ಮ ಎಳೆಯ ವಯಸ್ಸಿನಿಂದಲೇ ಹಿರಿಯರಿಂದ ಸುಸಂಸ್ಕೃತಿ ಬೆಳೆಸಿಕೊಂಡಿದ್ದರು. ದೇಶಪ್ರೇಮದ ಕಿಚ್ಚು ಅವರಲ್ಲಿ ಪ್ರತಿಕ್ಷಣವೂ ಪ್ರಜ್ವಲಿಸುತ್ತಿತ್ತು. ಉನ್ನತ ಉದ್ಯೋಗ ದೊರೆಯುವ ಹಂತದಲ್ಲೂ ಕೂಡಾ ಅದನ್ನು ಸ್ವೀಕರಿಸದೆ ತಾಯಿಯ ಸೇವೆಗಾಗಿ ಗಡಿನಾಡಿಗೆ ತೆರಳಿದರು. ಆದರೆ ಅವರ ಪ್ರಾಣ ಮಾತ್ರ ಮಾತೃ ಭೂಮಿಗಾಗಿ ತ್ಯಾಗ ಮಾಡಲ್ಪಟ್ಟಾಗ ನಮ್ಮಲ್ಲಿ ಯಾರ ಹೃದಯವು ಕೂಡ ಕರಗುವ ಸ್ಥಿತಿಯಲಿಲಿರಲಿಲ್ಲ. ಅಂದರೆ ನಿಜಕ್ಕೂ ಖೇದಕರ. ಇರಲಿ ಕಳೆದು ಹೋದುದರ ಬಗ್ಗೆ ಚಿಂತಿಸುತ್ತಾ ಕುಳಿತುಕೊಳ್ಳದೇ ಮುಂದೆ ನಡೆಯುವ ಅವಘಡಗಳನ್ನು ತಪ್ಪಿಸುವ ಅಥವಾ ಅದಕ್ಕೆ ಪರಿಹಾರ ಸೂಚಿಸುವ ನಿಟ್ಟಿನತ್ತ ಮನ ಮಾಡೋಣ. ಬರೇ ಕೌಟುಂಬಿಕವಾಗಿ ( ಸಾಂಸಾರಿಕವಾಗಿ ) ಯೋಚನೆ ಮಾಡದೆ ಲೌಕಿಕವಾಗಿ (ಸಾಮಾಜಿಕವಾಗಿ ) ಯೋಚನೆ ಮಾಡುವ ದಿಸೆಯಲ್ಲಿ ನಾವೆಲ್ಲ ಪ್ರಜ್ಞಾವಂತರಾಗೋಣ ಆಗದೇ ?
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು