ಅನಿಸುತಿದೆ ಯಾಕೋ ಇಂದು
ನೀನೇನೇ ನನ್ನವಳೆಂದು
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಆಹಾ ! ಎಂಥ ಮಧುರ ಯಾತನೆ.......
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೇ ಸುಮ್ಮನೆ.....
ನೀನಂದ್ರೆ ನಂಗಿಷ್ಟ, ನೀನೇನೆ ನನ್ನ ಪ್ರಾಣ, ನೀನಿಲ್ಲದೆ ನಾನಿಲ್ಲ, ನಿನ್ನ ಬಿಟ್ಟು ಒಂದು ಕ್ಷಣನೂ ಇರೊಲ್ಲ, ನೀನಿಲ್ಲದ ಒಂದು ಕ್ಷಣ ನನಗದು ಒಂದು ವರುಷ ಕಳೆದ ಹಾಗೆ, ನೀನೆಲ್ಲೋ ನಾನಲ್ಲೆ, ಬದುಕಿದ್ರೂ ನಿನ್ನ ಜೊತೆ ಸತ್ತರೂ ನಿನ್ನ ಜೊತೆ, ಅಪ್ಪ-ಅಮ್ಮ ಒಪ್ಪದಿದ್ರೂ ಸರಿ ನಾನು ನಿನ್ನ ಕೈ ಬಿಡಲ್ಲ, ನಿಂಗೋಸ್ಕರ ಆಕಾಶನ ಕೆಳಗಿಳಿಸಲಾ ? ಸಮುದ್ರವನ್ನೇ ಬತ್ತಿಸಿ ಬಿಡಲಾ...... ?
ಹೋಯ್ ! ಇದೇನು ಸಿನಿಮಾ ಡೈಲಾಗ್ ಹೇಳ್ತಾ ಇದ್ದೀನಿ ಅಂತ ತಿಳ್ಕೊಂಡ್ರಾ ? ಖಂಡಿತಾ ಅಲ್ಲ. ಇದು ಪ್ರಿಯಕರ-ಪ್ರಿಯತಮೆಯ ಮನವೊಲಿಸಲು ಉಪಯೋಗಿಸುವ ಶಬ್ಧ ಭಂಡಾರಗಳ ಸಂಗ್ರಹ. ಇಷ್ಟೇ ಅಲ್ಲ ವಿಚಾರಿಸುತ್ತಾ ಹೋದರೆ ಇನ್ನೂ ಅನೇಕ ಶಬ್ಧಗಳು ನಮಗೆ ದೊರೆಯುತ್ತವೆ. ಗಟ್ಟಿ ಮನಸ್ಸಿನ ಹುಡುಗಿಯರಿಗೆ ಇಂಥ ಮಾತುಗಳು ಪಥ್ಯವಾಗುವುದಿಲ್ಲವೋ ಏನೋ ಆದರೆ ಮುಗ್ಧ ಮನಸ್ಸಿನ ಹುಡುಗಿಯರಿಗಂತೂ ಈ ಸರಳ ಮಾತುಗಳು ಮಾತ್ರ " Clean brain wash " ಮಾಡಿ ಬಿಡುತ್ತವೆ.
ತನ್ನ ಬಗ್ಗೆ ಇನ್ನೊಬ್ಬ ವ್ಯಕ್ತಿ ತುಂಬಾ ಅನುಕಂಪ, ಸಹಾನುಭೂತಿ, ಕರುಣೆ, ತೋರಿಸಿದಾಗ ಯಾವ ಹೆಣ್ಣು ತಾನೇ ನಂಬುವುದಿಲ್ಲ ನೀವೇ ಹೇಳಿ ? ಮನೆಯಲ್ಲಿ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ-ಅಮ್ಮನ ನೆನಪಾದರೂ ಆಕೆಗೆ ಆ ಕ್ಷಣದಲ್ಲಿ ಹೇಗೆ ಬರುತ್ತೆ ಹೇಳಿ ? ಆವಾಗ ಆಕೆಗೆ ಅಪ್ಪ-ಅಮ್ಮನ ಪ್ರೀತಿ ಸ್ವಾರ್ಥದ ಪ್ರೀತಿಯಾಗಿ ಕಾಣುತ್ತದೆ.ಗಂಭೀರವಾದ ವಿಷಯದ ಬಗ್ಗೆ ಯೋಚನೆ ಮಾಡದೆ ಸಣ್ಮ ಸಣ್ಣ ವಿಷಯಗಳಿಗೆ ಯೋಚಿಸಿ, ಅನರ್ಥವನ್ನು ಕಲ್ಪಿಸುವತ್ತ ಹುಡುಗಿಯರ ಮನಸ್ಸು ಭಾಗಿಯಾಗುತ್ತಿದೆ ಎಂದರೆ ಅದರಲ್ಲಿ ತಪ್ಪಿಲ್ಲ ತಾನೇ ?
ಒಂದು ಹುಡುಗಿ ಪ್ರೀತಿ ಎಂಬ ಸಮುದ್ರದೊಳಗೆ ಬಿದ್ದಾಗ ಆಕೆಗೆ ಅದರಿಂದ ನಾಜೂಕಾಗಿ ಈಜಿ ಬರಲು ಗೊತ್ತಿದ್ದರೂ , ಭವಿಷ್ಯದ ಬಗ್ಗೆ ಸರಿಯಾದ ಚಿಂತನೆಯನ್ನು ಮಾಡದೆ, ಒಮ್ಮೆಲೇ ಒಂದು ಹುಡುಗ ಸಿಕ್ಕಾಗ ಅವನ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ, ಅವನ ಪ್ರೇಮ ಎಂಬ ಮೋಸದ ಬಲೆಗೆ ಬೀಳುತ್ತಾಳೆ. ಅವನ ಭಿನ್ನಣದ ಮಾತುಗಳಿಗೆ ಶರಣಾಗುತ್ತಾಳೆ. ಆಮೇಲೆ ಅವಳ ಪರಿಸ್ಥಿತಿ ಹೇಳ ತೀರದು.
ಅಷ್ಟು ಲೀಲಾಜಾಲವಾಗಿ ಹೆಣೆದ ಬಲೆಗೆ ಆಕೆ ಬಿದ್ದಿರುತ್ತಾಳೆ. ಅದರಿಂದ ಮೇಲೆ ಬರಲೂ ಆಗದೆ, ಸಾಯೋಕೂ ಆಗದೆ ಹಿನಾಯವಾಗಿ ನರಳಾಡುತ್ತಿರುತ್ತಾಳೆ.
ಏಕೆಂದರೆ, ಪ್ರೀತಿ-ಪ್ರೇಮ ಎಂದು ನಂಬಿಸಿ ಕೊನೆಗೆ ನೀನು-ನಾನು ಹೀಗೆ ಪ್ರೇಮಿಗಳಾಗಿ ಇರೋದು ಬೇಡ. ಊರಲ್ಲೆಲ್ಲ ನಮ್ಮ ಬಗ್ಗೆ ಏನೇನೋ ಹೇಳ್ತಾರೆ, ನಮ್ಮ ಜಾತಿ ಬೇರೆ, ನಿಮ್ಮ ಜಾತಿ ಬೇರೆ ಹಾಗಾಗಿ ನಂಗೆ ನಮ್ಮ ಮುಂದಿನ Life ನ್ನು ಎದುರಿಸೋ ಧೈರ್ಯ(ಶಕ್ತಿ) ಇಲ್ಲ. ಎಂದೆಲ್ಲಾ ಹೇಳಿ, ಕೊನೇಗೆ Sorry ನಾನು-ನೀನು ಇನ್ನು ಮುಂದೆ ಅಣ್ಣ-ತಂಗಿಯಾಗಿ ಇದ್ದು ಬಿಡೋಣ ಎಂದು ಪ್ರಿಯಕರ ಹೇಳಲಾರಂಭಿಸುತ್ತಾನೆ. ಅಲ್ಲಾ, ಪ್ರೀತಿ ಅನ್ನೋದು ಜಾತಿ ನೋಡಿ ಹುಟ್ಟೋದು ಅಲ್ಲ ತಾನೇ ? ಮನಸ್ಸುಗಳನ್ನು ಅರ್ಥೈಸಿಕೊಂಡು ಹಟ್ಟೋದು ತಾನೇ ? ಆದರೆ ಮದುವೆ,ಸಂಸಾರ ಎಂದಾಗ ಜಾತಿಯನ್ನೇ ಮುಂದಿಟ್ಟು ಪ್ರೀತಿಯನ್ನೇಕೆ ದೂರ ಮಾಡುತ್ತಾರೆ.?
ಒಂದು ವೇಳೆ ಅಣ್ಣ-ತಂಗಿಯಾಗಿಯೇ ಇರಬೇಕು ಎಂದಿದ್ದರೆ ಪ್ರೀತಿಯ ಜೊತೆ ಪ್ರೇಮ,ಮೋಹ ಯಾಕೆ ಬೇಕಿತ್ತು ? ಮನೆಯೊಳಗೆ ಇನ್ನೊಂದು ಮನೆಯನ್ನು ಕಟ್ಟಲು ಸಾಧ್ಯವೇ ? ಇಲ್ಲ ತಾನೇ ? ಹಾಗೆಯೇ ಮನಸ್ಸಿನೊಳಗೊಂದು ಮನಸ್ಸನ್ನು ಕಟ್ಟಲು ಸಾಧ್ಯವಿಲ್ಲ.
ಆದರೆ ನಿಜವಾಗಿಯೂ ಕೂಡಾ ಒಂದು ಹುಡುಗಿ ಆಕೆಯ ಜೀವನದಲ್ಲಿ ಒಂದು ಹುಡುಗನಿಗೆ ಸಂಪೂರ್ಣವಾಗಿ ಮನಸ್ಸು ನೀಡಿದ್ದಾಳೆ ಎಂದಾದರೆ ಆಕೆಗೆ ಅದನ್ನು ಪುನಃ ಪಡೆಯಲು ಸಾಧ್ಯವಿಲ್ಲ. ಇದರಿಂದ ಆಕೆ ಎಷ್ಟು ಕಷ್ಟಪಡುತ್ತಾಳೆ ಎನ್ನುವುದನ್ನು ಪ್ರೀತಿಸಿ ಮೋಸ ಹೋದ ಹುಡುಗಿಯರಲ್ಲಿ ಕೇಳಿ ನೋಡಿ. ಏಕೆಂದರೆ ಹುಡುಗಿಯರ ಮನಸ್ಸು ಕಠೋರ ಅಲ್ಲ, ಅದು ಎಂದಿಗೂ ಮುಗ್ಧತೆಯಿಂದ ಕೂಡಿರುತ್ತದೆ.
ತಂದೆ ತಾಯಂದಿರು ಕೂಡ ತಮ್ಮ ಮಕ್ಕಳ ಜೊತೆಯಲ್ಲಿ ನಂಬಿಕೆ, ಗೌರವ, ವಿಶ್ವಾಸ ಹಾಗೂ ಪ್ರೀತಿಯಿಂದ ಜೀವನ ನಡೆಸಬೇಕು. ಏಕೆಂದರೆ ತಂದೆ ತಾಯಂದಿರ ಪ್ರೀತಿಯಲ್ಲಿ ಎಳ್ಳಷ್ಟೂ ಕೊರತೆ ಕಂಡರು ಸಹಜವಾಗಿಯೇ ಮಕ್ಕಳು ಇನ್ನೊಬ್ಬರ ಪ್ರೀತಿ ಬಯಸುತ್ತಾರೆ. ಈ ರೀತಿಯಾಗಿ ಮುಂದೆ ಅನಾಹುತ ಸಂಭವಿಸುವುದಕ್ಕಿಂತ ತಂದೆ ತಾಯಿಯರೇ ತಮ್ಮ ಮಕ್ಕಳನ್ನು ಪ್ರೀತಿಯಿಂದ ಬಂಧಿಸಿಕೊಳ್ಳುವುದೇ
ಒಳ್ಳೆಯದಲ್ಲವೇ ? ಇದರಿಂದ ಮಕ್ಕಳ ಹಾಗೂ ಹೆತ್ತವರ ಜೀವನ ಕೂಡಾ ಸಂತೋಷದಿಂದ ಕೂಡಿರುತ್ತದೆ ಎಂದರೆ ಅದು ಅತಿಶಯೋಕ್ತಿ ಎಂದೆನಿಸದು.
ಜೀವನದಲ್ಲಿ ಯಾವುದೇ ರೀತಿಯ ನಿರ್ಧಾರಕ್ಕೆ ಬರುವ ಮೊದಲು ಮುಂದಿನ ಭವಿಷ್ಯದ ಬಗ್ಗೆ ಸರಿಯಾದ ಆಲೋಚನೆ ಅಗತ್ಯ. ಹಾಲಿಗೂ-ಸುಣ್ಣಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಂಡು ಬಾಳುವುದು ಮುಖ್ಯ. ನಾವು ಪಡೆದಿರುವ ಈ ಅಮೂಲ್ಯ ಜೀವನದಲ್ಲಿ ಪ್ರೀತಿ-ಪ್ರೇಮ ಎಂಬ ಹುಚ್ಚು ಕಲ್ಪನೆಗಳಿಗೆ ಸಿಗದೆ, ನಮಗೆ ಎದುರಾಗುವ ಪ್ರತೀ ಸಮಸ್ಯೆಯನ್ನೂ ಕೂಲಂಕುಷವಾಗಿ ವಿಮರ್ಶಿಸಿ ಕಾರ್ಯಪ್ರವೃತ್ತರಾಗುತ್ತಾ ಸುಖದಿಂದ ಜೀವನ ಸಾಗಿಸೋಣ ಆಗದೇ.......?
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು